ಮೇ 10ರಂದು ನಡೆದ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿಗಳು ನೂರಕ್ಕೂ ಅಧಿಕ ಕ್ಷೇತ್ರಗಳಲ್ಲಿ ಆರಂಭಿಕ ಮುನ್ನಡೆ ಸಾಧಿಸಿದ್ದಾರೆ. ಈ ಬಾರಿ ತಮ್ಮ ಪಕ್ಷಕ್ಕೆ ಬಹುಮತ ಸಿಗಬಹುದು ಎಂಬ ವಿಶ್ವಾಸದಲ್ಲಿರುವ ಕಾಂಗ್ರೆಸ್ ನಾಯಕರು, ಸರ್ಕಾರ ರಚನೆಗೆ ಈಗಾಗಲೇ ತಯಾರಿ ನಡೆಸಿದ್ದಾರೆ.
ಸರ್ಕಾರ ರಚನೆಗೆ ಅಗತ್ಯವಿರುವ ಮ್ಯಾಜಿಕ್ ನಂಬರ್ ದಾಟಬಹುದು ಎಂಬ ನಿರೀಕ್ಷೆ ಕಾಂಗ್ರೆಸ್ ನಾಯಕರಲ್ಲಿದ್ದು, ಒಂದೊಮ್ಮೆ ಸ್ವಲ್ಪ ಅತ್ತ ಇತ್ತ ಕಡೆಯಾದರೂ ತಮ್ಮ ಪಕ್ಷದ ಶಾಸಕರುಗಳು ‘ಆಪರೇಷನ್ ಕಮಲ’ ಕ್ಕೆ ಒಳಗಾಗಬಾರದೆಂಬ ಕಾರಣಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಹೀಗಾಗಿಯೇ ಬೆಂಗಳೂರಿನಲ್ಲಿ ಶಾಂಗ್ರಿಲಾ ಹಾಗೂ ಹಿಲ್ಟನ್ ಹೋಟೆಲ್ ಗಳಲ್ಲಿ ರೂಂಗಳನ್ನು ಬುಕ್ ಮಾಡಲಾಗಿದೆ ಎನ್ನಲಾಗಿದ್ದು, ಅಂತಿಮ ಫಲಿತಾಂಶ ಹೊರಬೀಳುತ್ತಿದ್ದಂತೆ ಭಾವಿ ಶಾಸಕರುಗಳನ್ನು ಕರೆತಂದು ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಸರ್ಕಾರ ರಚನೆವರೆಗೂ ಇವರುಗಳು ಹೋಟೆಲ್ ನಲ್ಲಿಯೇ ತಂಗಲಿದ್ದಾರೆ ಎಂದು ಹೇಳಲಾಗಿದೆ.