ಮುಂದಿನ ತಿಂಗಳು ನಡೆಯಲಿರುವ ಪಂಚರಾಜ್ಯಗಳ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ಆಯೋಗವು ಜನವರಿ 31ರವರೆಗೂ ಬಹಿರಂಗ ಚುನಾವಣಾ ರ್ಯಾಲಿ ಹಾಗೂ ರೋಡ್ ಶೋಗಳ ಮೇಲಿನ ನಿರ್ಬಂಧವನ್ನು ಮುಂದುವರಿಸಿದೆ. ಕೋವಿಡ್ 19 ಸಂಖ್ಯೆಯು ಮಿತಿಮೀರುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಈ ಕ್ರಮವನ್ನು ಕೈಗೊಂಡಿದೆ.
ಚುನಾವಣಾ ಆಯೋಗವು ಕೇಂದ್ರ ಆರೋಗ್ಯ ಸಚಿವಾಲಯದ ಪ್ರತಿನಿಧಿಗಳು, ಪಂಚ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳು ಹಾಗೂ ಇತರೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿ ತನ್ನ ನಿರ್ಧಾರವನ್ನು ಪರಾಮರ್ಷಿಸಿದ ಬಳಿಕವೇ ಈ ಘೋಷಣೆಯನ್ನು ಮಾಡಿದೆ.
ಇನ್ನು ಚುನಾವಣೆಗಳಲ್ಲಿ ಪ್ರಚಾರ ಕಾರ್ಯವೂ ಮಹತ್ವದ ಪಾತ್ರ ವಹಿಸುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳಿಗೆ ಕೆಲವು ವಿಚಾರಗಳಲ್ಲಿ ಸಡಿಲಿಕೆಯನ್ನು ನೀಡಿದೆ.
ರಾಜಕೀಯ ಪಕ್ಷಗಳ ಸಾರ್ವಜನಿಕ ಸಭೆಗಳು ಅಥವಾ ಮೊದಲ ಹಂತದ ಚುನಾವಣೆ ನಡೆಯಲಿರುವ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಸಾರ್ವಜನಿಕ ಸಭೆಗಳಿಗೆ ಜನವರಿ 28ರವರೆಗೆ ಅವಕಾಶವನ್ನು ನೀಡಿದೆ. ಈ ಸಭೆಗಳಲ್ಲಿ ಗರಿಷ್ಟ 500 ಮಂದಿ ಅಥವಾ ಸಭೆ ನಡೆಯುವ ಮೈದಾನದ ಸಾಮರ್ಥ್ಯದ ಶೇಕಡಾ 50ರಷ್ಟು ಮಂದಿಗೆ ಮಾತ್ರ ಹಾಜರಾಗಲು ಅನುಮತಿ ನೀಡಲಾಗಿದೆ.
ರಾಜಕೀಯ ಪಕ್ಷಗಳ ಸಾರ್ವಜನಿಕ ಸಭೆಗಳು ಅಥವಾ 2ನೇ ಹಂತದ ಚುನಾವಣೆ ನಡೆಯಲಿರುವ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಫೆಬ್ರವರಿ 1ರಿಂದ ಸಾರ್ವಜನಿಕ ಸಭೆ ನಡೆಸಲು ಅನುಮತಿ ನೀಡಲಾಗಿದೆ. ಈ ಸಭೆಗಳಲ್ಲಿ ಗರಿಷ್ಟ 500 ಮಂದಿ ಅಥವಾ ಸಭೆ ನಡೆಯುವ ಮೈದಾನದ ಸಾಮರ್ಥ್ಯದ ಶೇಕಡಾ 50ರಷ್ಟು ಮಂದಿಗೆ ಮಾತ್ರ ಹಾಜರಾಗಲು ಅನುಮತಿ ನೀಡಲಾಗಿದೆ.
ಮನೆ – ಮನೆ ಪ್ರಚಾರ ನಡೆಸಲು ಭಾಗವಹಿಸಬಹುದಾದ ಗರಿಷ್ಟ ಸಂಖ್ಯೆಯ ಜನರ ಮಿತಿಯನ್ನು ಐದರಿಂದ ಹತ್ತಕ್ಕೆ ಏರಿಕೆ ಮಾಡಲಾಗಿದೆ.