ಬಳ್ಳಾರಿ: ಬಳ್ಳಾರಿ ವಿಮ್ಸ್ ನಲ್ಲಿ ಮೂವರು ರೋಗಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಮ್ಸ್ ನಿರ್ದೇಶಕರು ವರದಿ ನೀಡಿದ್ದಾರೆ. ಷಡ್ಯಂತ್ರ ಆರೋಪದ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.
ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಡಾ. ಸುಧಾಕರ್, ವಿದ್ಯುತ್ ಕಡಿತವಾದ ಸಂದರ್ಭದಲ್ಲಿ ಇಬ್ಬರು ರೋಗಿಗಳ ಸಾವಾಗಿದೆ. ಆದರೆ ರೋಗಿಗಳು ಸಾವನ್ನಪ್ಪಿರುವುದು ವಿದ್ಯುತ್ ಕಡಿತದಿಂದಾಗಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಿಮ್ಸ್ ನಲ್ಲಿ ಅಂದು ರಾತ್ರಿ 8:30ಕ್ಕೆ ವಿದ್ಯುತ್ ಕಡಿತವಾಗಿದೆ. ಬಳಿಕ ವೆಂಟಿಲೇಟರ್ ನಲ್ಲಿ ಬ್ಯಾಟರಿ ಬ್ಯಾಕ್ ಅಪ್ ಇತ್ತು. 9:30ಕ್ಕೆ ವಿದ್ಯುತ್ ರಿಪೇರಿ ಮಾಡಲಾಗಿದೆ. ಹಾಗಾಗಿ ವಿದ್ಯುತ್ ಕಡಿತದಿಂದ ರೋಗಿಗಳು ಸಾವನ್ನಪ್ಪಿಲ್ಲ. ಕಿಡ್ನಿ ವೈಫಲ್ಯದಿಂದಾಗಿ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ರೋಗಿಗಳು ಸಾವನ್ನಪ್ಪಿದ್ದಾರೆ. ಹಾವು ಕಡಿತದಿಂದ ಬಳಲುತ್ತಿದ್ದ ಮಹಿಳೆಯೋರ್ವಳು ಮೃತಪಟ್ಟಿದ್ದಾರೆ. ಒಟ್ಟು ಮೂವರು ರೋಗಿಗಳು ಸಾವನ್ನಪ್ಪಿದ್ದಾರೆ. ವಿದ್ಯುತ್ ಕಡಿತದಿಂದ ಈ ಸಾವು ಸಂಭವಿಸಿದ್ದಲ್ಲ ಎಂದು ವಿಮ್ಸ್ ನಿರ್ದೇಶಕರು ವರದಿ ನೀಡಿದ್ದಾರೆ. ಪ್ರಕರಣದ ಬಗ್ಗೆ ಸರ್ಕಾರ ಇನ್ನೂ ನಿರ್ಧಾರ ಕೈಗೊಂಡಿಲ್ಲ, ಉನ್ನತ ಸಮಿತಿಯ ತನಿಖಾ ವರದಿ ಬಂದ ಬಳಿಕ ಮುಂದಿನ ಕ್ರಮಗಳ ಬಗ್ಗೆ ನಿರ್ಧರಿಸಲಾಗುವುದು ಎಂದು ಹೇಳಿದರು.