ಕಳೆದ ವರ್ಷ ದೇಶದಲ್ಲಿ ಕಾಣಿಸಿಕೊಂಡ ಕೊರೊನಾ ಮಹಾಮಾರಿ ಆರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡಿದೆ. ಅಷ್ಟೇ ಅಲ್ಲ, ಬಹುತೇಕ ಎಲ್ಲ ಕ್ಷೇತ್ರಗಳ ಮೇಲೂ ಪರಿಣಾಮ ಬೀರಿದ್ದು, ಈ ಪೈಕಿ ನ್ಯಾಯಾಲಯದ ಕಲಾಪಗಳು ಸಹ ಸೇರಿದ್ದವು.
ಕೊರೊನಾ ತಡೆಗಟ್ಟುವ ಉದ್ದೇಶದಿಂದ ನ್ಯಾಯಾಲಯದ ಕಲಾಪಗಳನ್ನು ಕಳೆದ ವರ್ಷದ ಮಾರ್ಚ್ ತಿಂಗಳಿನಿಂದ ವರ್ಚುವಲ್ ವ್ಯವಸ್ಥೆ ಮೂಲಕ ನಡೆಸಲಾಗುತ್ತಿತ್ತು. ವೀಡಿಯೋ ಕಾನ್ಫರೆನ್ಸ್ ಅಥವಾ ಟೆಲಿ ಕಾನ್ಫರೆನ್ಸ್ ಮೂಲಕ ವಕೀಲರು ಹಾಗೂ ಅರ್ಜಿದಾರರು ಕಲಾಪಕ್ಕೆ ಹಾಜರಾಗಬಹುದಾಗಿತ್ತು.
ಇದೀಗ ಬರೋಬ್ಬರಿ 17 ತಿಂಗಳ ಬಳಿಕ ಭೌತಿಕ ಸ್ವರೂಪದ ಕಲಾಪ ಆರಂಭಿಸಲು ಸುಪ್ರೀಂಕೋರ್ಟ್ ತೀರ್ಮಾನಿಸಿದೆ. ಸೆಪ್ಟೆಂಬರ್ ಒಂದರಿಂದ ಭೌತಿಕ ಸ್ವರೂಪದ ಕಲಾಪಗಳು ಆರಂಭವಾಗಲಿದ್ದು, ಇದರ ಜೊತೆಗೆ ವರ್ಚುವಲ್ ಕಲಾಪಗಳು ಸಹ ಮುಂದುವರೆಯಲಿದೆ.
ವಕೀಲರ ಸಂಘದವರು ಭೌತಿಕ ಕಲಾಪ ಆರಂಭಿಸುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳ ಸಮಿತಿ ಶಿಫಾರಸು ಆಧರಿಸಿ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರ ನಿರ್ದೇಶನದಂತೆ ಈ ಹೊಸ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ.