ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಸಚಿವರುಗಳ ವಿರುದ್ಧ ಶಾಸಕರು ಪತ್ರ ಬರೆದು ದೂರು ನೀಡಿದ್ದಾರೆ ಎಂಬ ವಿಚಾರವನ್ನು ಅಲ್ಲಗಳೆದಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ಎಲ್ಲರೂ ಅವರವರ ಕ್ಷೇತ್ರಗಳಲ್ಲಿ ಕೆಲಸ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಯಾರೂ ಯಾವ ಪತ್ರವನ್ನೂ ಬರೆದಿಲ್ಲ, ಯಾವ ಅಸಮಾಧಾನವೂ ಇಲ್ಲ, ಎಲ್ಲಾ ಊಹಾಪೋಹದ ಸುದ್ದಿ ಹಬ್ಬಿಸುತ್ತಿದ್ದಾರೆ ಎಂದರು.
ನಮ್ಮ 5 ಗ್ಯಾರಂಟಿ ಕಾರ್ಯಕ್ರಮಗಳನ್ನು ಜನರಿಗೆ ಯಾವ ರೀತಿ ತಲುಪಿಸುತ್ತಿದ್ದೇವೆ ಎಂಬ ಬಗ್ಗೆ ಶಾಸಕರಿಗೆ ಗೈಡ್ ಲೈನ್ಸ್ ಕೊಡಬೇಕಾಗಿದೆ. ಪ್ರತಿ ಗ್ರಾಮ ಪಂಚಾಯಿತಿಗೂ ನಮ್ಮ ಯೋಜನೆ ತಲುಪಬೇಕು. ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಇನ್ನು ಎಲ್ಲಾ ಸಚಿವರು ಶಾಸಕರಿಗೆ ಸ್ಪಂದಿಸುತ್ತಿದ್ದಾರೆ. ಯಾವ ದೂರು ಯಾರಿಂದಲೂ ಬಂದಿಲ್ಲ. ಹೆಚ್ಚಿನ ಅನುದಾನದ ಬಗ್ಗೆ ಈ ವರ್ಷ ಸ್ವಲ್ಪ ಕಾಯುವಂತೆ ಹೇಳಿದ್ದೇವೆ ಎಂದರು.
ಎಲ್ಲರೂ ಅವರವರ ಕ್ಷೇತ್ರಗಳಲ್ಲಿ ಅವರವರ ಕೆಲಸ ಮಾಡುತ್ತಿದ್ದಾರೆ. ಯಾವುದೇ ಪತ್ರವನ್ನೂ ಯಾರೂ ಬರೆದಿಲ್ಲ. ಎಲ್ಲ ಊಹಾಪೊಹದ ಮಾತುಗಳು ಎಂದು ಹೇಳಿದರು.