ಬೆಂಗಳೂರು: ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ನೀಡಲು ನಿರಾಕರಿಸಿದೆ. ಇದರಿಂದ ಅಕ್ಕಿ ಕೊರತೆಯುಂಟಾಗಿದ್ದು, 5 ಕೆಜಿ ಅಕ್ಕಿ ಬದಲಾಗಿ ಬಿಪಿಎಲ್ ಪಡಿತರದಾರರ ಖಾತೆಗೆ ಹಣ ಹಾಕುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ಬಡವರ ಕಾರ್ಯಕ್ರಮಕ್ಕೆ ಕಲ್ಲು ಹಾಕಲು ಹೊರಟಿದೆ. ಹಣ ಕೊಡುತ್ತೇವೆ ಎಂದರೂ ನಮಗೆ ಅಕ್ಕಿ ಕೊಡಲಿಲ್ಲ. ಸಚಿವ ಕೆ.ಹೆಚ್. ಮುನಿಯಪ್ಪ ಕೇಂದ್ರ ಆಹಾರ ಸಚಿವ ಗೋಯಲ್ ಅವರನ್ನು ಭೇಟಿಯಾಗಿ ಮನವಿ ಮಾಡಿದರೂ ಒಪ್ಪಲಿಲ್ಲ, ನಾನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮನವಿ ಮಾಡಿದೆ ಆದರೂ ಪ್ರಯೋಜನವಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ಅಕ್ಕಿ ಕೊರತೆ ಹಿನ್ನೆಲೆಯಲ್ಲಿ ಅಕ್ಕಿ ಬದಲಾಗಿ ಫಲಾನುಭವಿಗಳಿಗೆ ಹಣ ಕೊಡುತ್ತೇವೆ. ಒಬ್ಬ ಬಿಪಿಎಲ್ ಸದಸ್ಯರಿದ್ದರೆ 5 ಕೆಜಿ ಅಕ್ಕಿ ಬದಲು 170 ರೂಪಾಯಿ. ಬಿಪಿಎಲ್ ಕುಟುಂಬದಲ್ಲಿ ಇಬ್ಬರಿದ್ದರೆ 340 ರೂ. ನಾಲ್ವರಿದ್ದರೆ ತಲಾ 170ರೂಪಾಯಿ ಕೊಡುತ್ತೇವೆ ಎಂದು ಹೇಳಿದರು.