ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ಶೋ ಬಜೆಟ್, ಬಿಸಿಲು ಕುದುರೆ ಬಜೆಟ್ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಬೊಮ್ಮಾಯಿ ಅವರ ಬಜೆಟ್ ಭಾಷಣ ಮುಗಿಯುತ್ತಿದ್ದಂತೆ ಕಿವಿಯ ಮೇಲೆ ಚಂಡೂವು ಇಟ್ಟುಕೊಂಡು ಬಂದ ಡಿ.ಕೆ.ಶಿವಕುಮಾರ್, ಸಿಎಂ ಬೊಮ್ಮಾಯಿ ಸದನದ ಒಳಗೂ, ಹೊರಗು ಜನರ ಕಿವಿ ಮೇಲೆ ಹೂವಿಡುವ ಕೆಲಸ ಮಾಡಿದ್ದಾರೆ. ರಾಜ್ಯದ ಜನತೆಯ ಕಿವಿ ಮೇಲೆ ಚಂಡೂವ ಇಟ್ಟಿದ್ದಾರೆ. ಹಾಗಾಗಿ ಕಾಂಗ್ರೆಸ್ ನಾಯಕರು ಕಿವಿ ಮೇಲೆ ಚಂಡೂವು ಇಟ್ಟುಕೊಂಡು ವಿಶೇಷವಾಗಿ ಬಜೆಟ್ ಪ್ರತಿಭಟಿಸುತ್ತಿದ್ದೇವೆ ಎಂದರು.
ಜಾತ್ರೆಯಲ್ಲಿ ಸಿಗುವ ಕಲರ್ ಕನ್ನಡಕದಂತೆ ಜನರಿಗೆ ಕಲರ್ ಕನ್ನಡಕ ಕೊಟ್ಟಿದ್ದಾರೆ. ಅದನ್ನು ಹಾಕಿಕೊಂಡು ನೋಡಿದರೆ ಏನೂ ಕಾಣಲ್ಲ, ಬರಿ ನೋಡಲು ಕನ್ನಡಕ ಅಷ್ಟೇ. ಸಿಎಂ ಬೊಮ್ಮಾಯಿ ಅವರ ಬಜೆಟ್ ನ್ನು ಶೋ ಕೇಸ್ ನಲ್ಲಿ ಇಟ್ಟುಕೊಳ್ಳಬಹುದು. ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿಗಳಿಗೆ ಸ್ವರವೇ ಇರಲಿಲ್ಲ, ನಿರಂತರವಾಗಿ ಓದಿದ್ದೇನೆ ಎಂದು ಹೇಳಿಕೊಳ್ಳಬಹುದು ಅಷ್ಟೇ. ಈ ಬಜೆಟ್ ಯಾರ ಕಣ್ಣಿಗೆ ಕಾಣದ, ಯಾರ ಕೈಗೆ ಸಿಗದ ಬಜೆಟ್ ಎಂದು ಲೇವಡಿ ಮಾಡಿದ್ದಾರೆ.
ಈ ಬಜೆಟ್ ನಿಂದಾಗಿ ಕಾಂಗ್ರೆಸ್ ಪ್ರಣಾಳಿಕೆಗೆ ಇನ್ನಷ್ಟು ಶಕ್ತಿ ಬರಲಿದೆ. ನಾವು ಈಗಾಗಲೇ ಮಹಿಳೆಯರಿಗೆ 2000 ರೂಪಾಯಿ ಸಹಾಯ ಧನ ಘೋಷಿಸಿದ್ದೇವೆ. ಈಗ ಸರ್ಕಾರದವರು 500 ರೂಪಾಯಿ ನೀಡುವುದಾಗಿ ಘೋಷಿಸಿದ್ದಾರೆ. 500 ರೂಪಾಯಿ ಯಾವುದಕ್ಕೆ ಸಾಕು? ಅಡುಗೆ ಅನಿಲದ ಬೆಲೆ ಸಾವಿರ ರೂಪಾಯಿ ಆಗಿದೆ. ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಜನರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಸರ್ಕಾರದ ಬಜೆಟ್ ಭಾಷಣ ಕಾಂಗ್ರೆಸ್ ಗೆ ಮತ್ತಷ್ಟು ಶಕ್ತಿ ನೀಡಲಿದೆ ಎಂದು ತಿಳಿಸಿದ್ದಾರೆ.