ಬೆಂಗಳೂರು: ಇಂದಿನಿಂದ ರಾಜ್ಯ ಬಜೆಟ್ ಅಧಿವೇಶನ ಆರಂಭವಾಗಿದೆ. ಆಡಳಿತಾರೂಢ ಬಿಜೆಪಿಯ ಕೊನೆ ಅಧಿವೇಶನ ಇದಾಗಿದ್ದು, ಕಡ್ಡಾಯವಾಗಿ ಆಡಳಿತ, ವಿಪಕ್ಷ ಶಾಸಕರು ಸದನಕ್ಕೆ ಹಾಜರಾಗಬೇಕು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚಿಸಿದ್ದರೂ ತಲೆಕೆಡಿಸಿಕೊಳ್ಳದ ಸದಸ್ಯರು ಸದನದಿಂದ ಗೈರಾಗಿದ್ದಾರೆ.
ಬಜೆಟ್ ಅಧಿವೇಶನದ ಮೊದಲ ದಿನವಾದ ಇಂದು ಜಂಟಿ ಸದನವನ್ನುದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡುತ್ತಿದ್ದರೂ ಆಡಳಿತ ಹಾಗೂ ವಿಪಕ್ಷ ಸದಸ್ಯರು ಅಧಿವೇಶನಕ್ಕೆ ಗೈರಾಗುವ ಮೂಲಕ ಬೇಜವಾಬ್ದಾರಿ ಮೆರೆದಿದ್ದಾರೆ.
ಶಾಸಕರು ಮಾತ್ರವಲ್ಲ, ಮಾಜಿ ಸಿಎಂ ಗಳಾದ ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿ ಕೂಡ ಗೈರಾಗಿದ್ದಾರೆ. ಶಾಸಕರಾದ ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬಾಳ್ಕರ್ ಸೇರಿದಂತೆ ಹಲವರು ಕಲಾಪದ ಮೊದಲ ದಿನವೇ ಗೈರಾಗಿದ್ದಾರೆ. ಮಂತ್ರಿ ಸ್ಥಾನ ಸಿಗಲಿಲ್ಲ ಎಂದು ಅಸಮಾಧಾನಗೊಂಡಿದ್ದ ಕೆ.ಎಸ್.ಈಶ್ವರಪ್ಪ ಬೆಳಗಾವಿ ಅಧಿವೇಶನದಲ್ಲಿ ಗೈರಾಗಿದ್ದರು. ಆದರೆ ಈ ಬಾರಿ ಅಧಿವೇಶನಕ್ಕೆ ಹಾಜರಾಗಿದ್ದಾರೆ. ಆದರೆ ರಮೇಶ್ ಜಾರಕಿಹೊಳಿ ಈ ಬಾರಿಯೂ ಅಧಿವೇಶನಕ್ಕೆ ಹಾಜರಾಗಿಲ್ಲ ಎಂದು ತಿಳಿದುಬಂದಿದೆ.