ನವದೆಹಲಿ: ಕೋವಿಡ್ ಮೂರನೇ ಅಲೆ ನಡುವೆಯೂ ಕೇಂದ್ರ ಬಜೆಟ್ ಅಧಿವೇಶನಕ್ಕೆ ದಿನಾಂಕ ನಿಗದಿಯಾಗಿದ್ದು ಎರಡು ಹಂತಗಳಲ್ಲಿ ಬಜೆಟ್ ಅಧಿವೇಶನ ನಡೆಯಲಿದೆ ಎಂದು ತಿಳಿದುಬಂದಿದೆ.
ಜನವರಿ 31ರಿಂದ ಆರಂಭವಾಗಲಿರುವ ಸಂಸತ್ ಬಜೆಟ್ ಅಧಿವೇಶನ ಏಪ್ರಿಲ್ 8ರವರೆಗೆ ನಡೆಯಲಿದ್ದು, ಎರಡು ಭಾಗಗಳಲ್ಲಿ ಬಜೆಟ್ ಅಧಿವೇಶ ನಡೆಯಲಿದೆ. ಈಗಾಗಲೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡನೆಗೆ ಸಿದ್ಧತೆ ನಡೆಸಿದ್ದು, ವಿವಿಧ ಇಲಾಖೆ, ಕ್ಷೇತ್ರಗಳ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.
ಅಧಿವೇಶನದ ಮೊದಲ ದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಂಸತ್ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಫೆ.1 ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದ್ದು, ಫೆಬ್ರವರಿ 2ರಂದು ರಾಷ್ಟ್ರಪತಿಗಳ ಭಾಷಣಕ್ಕೆ ಅಭಿನಂದನೆ ಸಲ್ಲಿಸಲಾಗುತ್ತಿದೆ. ಬಳಿಕ ಬಜೆಟ್ ಮೇಲಿನ ಚರ್ಚೆ ಫೆ.3 ರಿಂದ ಆರಂಭವಾಗಲಿದೆ.
ಮೊದಲ ಹಂತದಲ್ಲಿ 12 ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಫೆ.11ಕ್ಕೆ ಅಂತ್ಯವಾಗಲಿದೆ. ಒಂದು ತಿಂಗಳ ಬಳಿಕ ಮಾರ್ಚ್ 14ರಿಂದ ಬಜೆಟ್ ಅಧಿವೇಶನದ ಎರಡನೇ ಭಾಗ ಆರಂಭಗೊಳ್ಳಲಿದ್ದು, ಏಪ್ರಿಲ್ 8ರವರೆಗೂ ಅಧಿವೇಶನ ನಡೆಯಲಿದೆ ಎಂದು ತಿಳಿದುಬಂದಿದೆ.