ಬೆಂಗಳೂರು: ರಾಜ್ಯದ ಹಲವೆಡೆ ಎನ್ ಐ ಎ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಿಲುವು ಯಾವಾಗಲೂ ಒಂದೇ ಆಗಿರುತ್ತದೆ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಬಿ. ಪಾಟೀಲ್, ಕಾಲ ಕಾಲಕ್ಕೆ ಕಾಂಗ್ರೆಸ್ ಪಕ್ಷದ ನಿಲುವು ಬದಲಾಗುವುದಿಲ್ಲ. ಬಜರಂಗದಳ, ಪಿಎಫ್ಐ, ಎಸ್ ಡಿ ಪಿ ಐ ಎಲ್ಲಾ ಯಾವುದೇ ಇರಲಿ ಎಲ್ಲಾ ಸಂಘಟನೆಗಳನ್ನು ನಿಷೇಧ ಮಾಡಲಿ. ಈ ಹಿಂದೆಯೇ ನಾವು ಈ ಬಗ್ಗೆ ಆಗ್ರಹಿಸಿದ್ದೆವು. ಹಾಗಾಗಿ ಯಾವಾಗಲೂ ಕಾಂಗ್ರೆಸ್ ನಿಲುವು ಒಂದೇ ಆಗುತ್ತದೆ ಎಂದರು.
ರಾಜ್ಯ ಸರ್ಕಾರ ಇಂತಹ ಸಂಘಟನೆಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಈ ಸಂಘಟನೆಗಳನ್ನು ನಿಷೇಧಿಸಿ ಎಂದು ನಾವೇ ಹೇಳಿದ್ದೆವು. ಆದರೆ ಸಂಘಟನೆಗಳನ್ನು ಬ್ಯಾನ್ ಮಾಡಲು ಅವರು ತಯಾರಿಲ್ಲ. ಎಲ್ಲಾ ಸಂಘಟನೆಗಳನ್ನು ಬ್ಯಾನ್ ಮಾಡಲು ನಮ್ಮ ಬೆಂಬಲ ಯಾವತ್ತೂ ಇರುತ್ತದೆ ಎಂದು ಹೇಳಿದರು.