ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಬಜರಂಗದಳ ಕಾರ್ಯಕರ್ತ ಸುನೀಲ್ ಹತ್ಯೆಗೆ ಯತ್ನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಇದು ಹಿಂದೂ-ಮುಸ್ಲಿಂ ಸಂಘರ್ಷವಲ್ಲ, ವೈಯಕ್ತಿಕ ಕಾರಣಕ್ಕಾಗಿ ನಡೆದಿದ್ದ ಜಗಳ ಕೊಲೆ ಯತ್ನ ಹಂತಕ್ಕೆ ತಲುಪಿದೆ ಎಂದು ಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.
ಬಜರಂಗದಳ ಕಾರ್ಯಕರ್ತ ಸುನೀಲ್ ತನ್ನ ಸಹೋದರಿಯನ್ನು ಚುಡಾಯಿಸಿದ್ದ ಎಂಬ ಕಾರಣಕ್ಕೆ ಕೋಪಗೊಂಡ ಸಮೀರ್, ಸುನೀಲ್ ಮೇಲೆ ಮಾರಣಾಂತಿಕ ಹಲ್ಲೆಗೆ ಮುಂದಾಗಿ ದಾಳಿ ನಡೆಸಿದ್ದಾನೆ ಎಂದು ತಿಳಿಸಿದ್ದಾರೆ.
ಸುನೀಲ್, ಸಮೀರ್ ಸಹೋದರಿಯನ್ನು ನಾಲ್ಕೈದು ತಿಂಗಳಿನಿಂದ ಚುಡಾಯಿಸುತ್ತಿದ್ದನಂತೆ. ವಿಷಯ ತಿಳಿದು ಸಮೀರ್, ಸುನೀಲ್ ಗೆ ಹಲವು ಬಾರಿ ಎಚ್ಚರಿಸಿದ್ದ ಆದಾಗ್ಯೂ ಸುನೀಲ್ ಸಮೀರ್ ತಂಗಿಯ ಫೋನ್ ನಂಬರ್ ನ್ನು ಕೇಳಿದ್ದ. ಇದರಿಂದ ಸಿಟ್ಟಿಗೆದ್ದು ಸಮೀರ್ ಹಲ್ಲೆಗೆ ಮುಂದಾಗಿದ್ದಾನೆ.
ಸೋಮವಾರ ಸಮೀರ್ ಮೇಕೆಗೆ ಹುಲ್ಲು ತರಲೆಂದು ಹೊರಟಿದ್ದ. ಈ ಸಂದರ್ಭದಲ್ಲಿ ಸುನೀಲ್ ಬೈಕ್ ನಲ್ಲಿ ಬಂದಿದ್ದ. ಆಗ ಹುಲ್ಲು ಕೊಯ್ಯಲು ಹಿಡಿದಿದ್ದ ಕತ್ತಿಯನ್ನೇ ಹಿಡಿದು ಆತನ ಕಡೆಗೆ ಧಾವಿಸಿದ್ದ ಎಂದು ಸಮೀರ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದರು.
ಸುನೀಲ್, ಸಮೀರ್ ತಂಗಿ ಚುಡಾಯಿಸಿದ್ದ ಬಗ್ಗೆ ಕಾಲ್ ರೆಕಾರ್ಡ್ ದಾಖಲೆಗಳು ಸಿಕ್ಕಿವೆ. ಸುನೀಲ್ ಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀರ್ ಜತೆ ಇಮಿಯಾನ್ ಹಾಗೂ ಮನ್ಸೂರ್ ಎಂಬುವವರನ್ನೂ ಬಂಧಿಸಿ ವಿಚಾರಣೆ ನಡೆಸಲಾಗಿದೆ. ಕ್ರಿಕೆಟ್ ಮ್ಯಾಚ್ ಸಂಬಂಧ ಈ ಮೂವರು ಲಾಡ್ಜ್ ನಲ್ಲಿ ಉಳಿದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲಿಯೇ ಕೊಲೆ ಯತ್ನದ ಸಂಚು ರೂಪಿಸಲಾಗಿತ್ತೇ? ಎಂಬ ಬಗ್ಗೆ ಇನ್ನಷ್ಟೇ ವಿಚಾರಣೆಯಿಂದ ತಿಳಿದು ಬರಬೇಕಿದೆ. ವೈಯಕ್ತಿಕ ದ್ವೇಷವೇ ಇರಲಿ, ಏನೇ ಇರಲಿ ಯಾರೂ ಕೂಡ ಕಾನೂನು ಕೈಗೊತ್ತಿಕೊಳ್ಳಬಾರದು, ಪೊಲೀಸರ ಗಮನಕ್ಕೆ ತರಬೇಕು ಎಂದು ತಿಳಿಸಿದ್ದಾರೆ.