ಕೋಟ್ಯಾಂತರ ರೂಪಾಯಿ ಹಣದೊಂದಿಗೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪರ ಪುತ್ರ ಪ್ರಶಾಂತ್ ಇತರೆ ನಾಲ್ವರೊಂದಿಗೆ ಈಗ 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಇದರ ಮಧ್ಯೆ ಪ್ರಶಾಂತ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಬೆಂಗಳೂರು ಜಲ ಮಂಡಳಿಯಲ್ಲಿ ಮುಖ್ಯ ಲೆಕ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಶಾಂತ್ ಅವರನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಪತ್ರ ಬರೆಯಲಾಗಿದೆ ಎಂದು ತಿಳಿದುಬಂದಿದೆ.
ಲೋಕಾಯುಕ್ತ ಪೊಲೀಸರ ದಾಳಿ ವೇಳೆ ಪ್ರಶಾಂತ್ ಅವರ ಕಚೇರಿ ಹಾಗೂ ನಿವಾಸದಲ್ಲಿ ಕೋಟ್ಯಾಂತರ ರೂಪಾಯಿ ನಗದು ಸಿಕ್ಕಿದ್ದು, ಪ್ರಶಾಂತ್ ಅವರ ಬ್ಯಾಂಕ್ ಖಾತೆಯಲ್ಲಿಯೂ ಕೋಟಿಗಟ್ಟಲೆ ಹಣವಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಹುದ್ದೆಯಿಂದ ಅಮಾನತುಗೊಳಿಸುವಂತೆ ಸೂಚಿಸಲಾಗಿದ್ದು, ಸದ್ಯದಲ್ಲಿಯೇ ಸಸ್ಪೆಂಡ್ ಮಾಡುವ ಸಾಧ್ಯತೆ ಇದೆ.