ರಾಮನಗರ: ಬಂಡೆಮಠದ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿರುವಾಗಲೇ ಎರಡನೇ ವಿಡಿಯೋ ವೈರಲ್ ಆಗಿದ್ದು, ಈ ನಡುವೆ ವಿಡಿಯೋದಲ್ಲಿದ್ದ ಮಹಿಳೆ ಫೋಟೋ ಪೊಲೀಸರಿಗೆ ಲಭ್ಯವಾಗಿದೆ ಎಂದು ತಿಳಿದುಬಂದಿದೆ.
ಬಂಡೆಮಠದ ಬಸವಲಿಂಗಶ್ರೀ ಸ್ವಾಮೀಜಿಯವರನ್ನು ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿ ಷಡ್ಯಂತ್ರ ನಡೆಸಲಾಗಿದ್ದಲ್ಲದೇ ಸ್ವಾಮೀಜಿ ಹೆಣ್ಣಿನ ಮೋಹಕ್ಕೆ ಸಿಲುಕಿ ಬಳಿಕ ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಇದೀಗ ಸ್ವಾಮೀಜಿ ಅವರ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಇಂತಹ ಹಲವು ವಿಡಿಯೋಗಳಿರುವ ಶಂಕೆ ಪೊಲೀಸರಿಂದ ವ್ಯಕ್ತವಾಗಿದೆ. ಅಲ್ಲದೇ ವಿಡಿಯೋದಲ್ಲಿದ್ದ ಮಹಿಳೆ ಫೋಟೋ ಲಭ್ಯವಾಗಿದ್ದು, ಮಹಿಳೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಅಲ್ಲದೇ ಬಸವಲಿಂಗಶ್ರೀ ಅವರನ್ನು ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿದ್ದ ಮತ್ತೋರ್ವ ಸ್ವಾಮೀಜಿ ಬಗ್ಗೆಯೂ ಪೊಲೀಸರಿಗೆ ಸುಳಿವು ಸಿಕ್ಕಿದೆ. ಮತ್ತೊಂದು ವಿಚಾರ ಕೂಡ ಬಹಿರಂಗವಾಗಿದ್ದು, ಅ.26ರಂದು ಮಠದ ಆವರಣದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿ ನಿಲಯ, ಅತಿಥಿ ಗೃಹ ಕಟ್ಟಡ, ಪ್ರಸಾದ ನಿಲಯ ಸೇರಿದಂತೆ ಹಲವು ಕಟ್ಟಡಗಳ ಶಂಕುಸ್ಥಾಪನೆಗೆ ಸಿದ್ಧತೆ ನಡೆದಿತ್ತು. ಅಂದೇ ವಿಡಿಯೋ ವೈರಲ್ ಮಾಡಲು ಗ್ಯಾಂಗ್ ಪ್ಲಾನ್ ಮಾಡಿತ್ತು ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಸ್ವಾಮೀಜಿ ಮರ್ಯಾದೆಗೆ ಅಂಜಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.