ರಾಮನಗರ: ಬಂಡೆಮಠದ ಬಸವಲಿಂಗಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಣ್ಣೂರು ಶ್ರೀ ಡಾ. ಮೃತ್ಯುಂಜಯ ಸ್ವಾಮೀಜಿ ಹಾಗೂ ದೊಡ್ಡಬಳ್ಳಾಪುರ ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿನಿಯನ್ನು ಮಾಗಡಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಯುವತಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ದಬಳ್ಳಾಪುರ ಮೂಲದ ನೀಲಾಂಬಿಕಾ ಅಲಿಯಾಸ್ ಚಂದು ಎಂದು ಗುರುತಿಸಲಾಗಿದ್ದು, ಈಕೆ ಎಂಜಿನಿಯರಿಂಗ್ ಎರಡನೇ ವರ್ಷದಲ್ಲಿ ಓದುತ್ತಿದ್ದಳು. ರಜೆಯಲ್ಲಿ ಅಜ್ಜಿಯ ಮನೆಗೆಂದು ಬಂದಿದ್ದಾಗ ಯುವತಿ ಕಣ್ಣೂರು ಮೃತ್ಯುಂಜಯ ಸ್ವಾಮೀಜಿ ಸಂಪರ್ಕಕ್ಕೆ ಬಂದಿದ್ದಾಳೆ.
ಬಂಡೆಮಠದ ಬಸವಲಿಂಗಶ್ರೀ ಹಾಗೂ ಕಣ್ಣೂರು ಮಠದ ಮೃತ್ಯುಂಜಯ ಶ್ರೀ ಅಣ್ಣತಮ್ಮಂದಿರಾಗಿದ್ದು, ಜಮೀನು ವಿಚಾರವಾಗಿ ಇಬ್ಬರ ನಡುವೆ ಆಗಾಗ ಜಗಳ, ಮನಸ್ತಾಪವಿತ್ತು ಎನ್ನಲಾಗಿದೆ. ಹೇಗೋ ಕಣ್ಣೂರುಶ್ರೀ ಸಂಪರ್ಕಕ್ಕೆ ಬಂದಿದ್ದ ಯುವತಿ ನೀಲಾಂಬಿಕೆಯನ್ನು ಬಳಸಿಕೊಂಡು ಬಂಡೆಮಠದ ಸ್ವಾಮೀಜಿಯನ್ನು ಖೆಡ್ಡಾಗೆ ಕೆಡವಿದ್ದಾರೆ ಎನ್ನಲಾಗಿದೆ.
ಯುವತಿ ಬಂಡೆಮಠದ ಸ್ವಾಮೀಜಿ ಪರಿಚಯ ಮಾಡಿಕೊಂಡು ಆಗಾಗ ವಿಡಿಯೋ ಕಾಲ್ ಮಾಡಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದಳು. ಮಹದೇವಯ್ಯ ಎಂಬಾತನಿಂದ ವಿಡಿಯೋ ಎಡಿಟ್ ಮಾಡಿಸಿ ವಿಡಿಯೋ ವೈರಲ್ ಮಾಡುತ್ತಿದ್ದರು ಎಂಬುದು ಪೊಲೀಸ್ ತನಿಖೆಯಿಂದ ಬಯಲಾಗಿದೆ. ಬಂಧಿತ ಕಣ್ಣೂರು ಶ್ರೀ ಹಾಗೂ ಯುವತಿಯನ್ನು ಮಾಗಡಿ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.