ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಇನ್ನೂ ನಾಲ್ಕು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಈ ಮಧ್ಯೆ ಮತ್ತಷ್ಟು ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಗುಜರಾತ್ ನ ಅಹಮದಾಬಾದ್, ಮಹಾರಾಷ್ಟ್ರದ ಮುಂಬೈ, ಥಾಣೆ ನಗರಗಳಲ್ಲಿ ಕುಂಭದ್ರೋಣ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಂಡಿದೆ.
ಮಹಾರಾಷ್ಟ್ರದ ರಾಯಘಡ, ರತ್ನಗಿರಿ, ಸತಾರ, ಪುಣೆಯಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕೊಂಕಣ ವಲಯದಲ್ಲಿ ಮಳೆ ಮುಂದುವರೆಯಲಿದ್ದು, ಚಂದ್ರಾಪುರ, ಗಡಚಿರೋಲಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ಸೂಚಿಸಲಾಗಿದೆ.
ಕರ್ನಾಟಕದಲ್ಲಿ ರಾಜಧಾನಿ ಬೆಂಗಳೂರು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಇನ್ನೂ ನಾಲ್ಕು ದಿನಗಳ ಕಾಲ ವ್ಯಾಪಕವಾಗಿ ಮಳೆಯಾಗಲಿದೆ. ಕರಾವಳಿ ಜಿಲ್ಲೆಗಳಲ್ಲಿ ಎರಡು ದಿನಗಳ ಕಾಲ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಯಾದಗಿರಿ, ವಿಜಯಪುರ, ಬಾಗಲಕೋಟೆ, ದಾವಣಗೆರೆ, ಮೈಸೂರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರಿನಲ್ಲಿ ಹಲವೆಡೆ ಬಿರುಗಾಳಿ ಸಹಿತ ಮಳೆಯಾಗಲಿದ್ದು, ನಾಲ್ಕು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ತಿಳಿಸಿದೆ.