ಐಟಿ ಕಂಪನಿಗಳು ಉದ್ಯೋಗಿಗಳಿಗೆ ಶಾಕ್ ಮೇಲೆ ಶಾಕ್ ನೀಡುತ್ತಿವೆ. ಗಣನೀಯ ಪ್ರಮಾಣದ ವಾರ್ಷಿಕ ವೇತನದ ಭರವಸೆ ನೀಡಿದ್ದ ಸಾಫ್ಟ್‌ವೇರ್ ದೈತ್ಯ ವಿಪ್ರೋ, ಈಗ ಫ್ರೆಶರ್‌ಗಳ ವೇತನವನ್ನು ಕಡಿತಗೊಳಿಸುತ್ತಿದೆ. ಸುಮಾರು 50 ಪ್ರತಿಶತದಷ್ಟು ವೇತನ ಕಡಿತಕ್ಕೆ ಮುಂದಾಗಿದೆ. ಮೌಲ್ಯಮಾಪನದಲ್ಲಿ ಕಳಪೆ ಪ್ರದರ್ಶನ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೆ ವಿಪ್ರೋ ಕಂಪನಿ 452 ಫ್ರೆಶರ್‌ಗಳನ್ನು ವಜಾಗೊಳಿಸಿತ್ತು.
ವಿಪ್ರೋದಲ್ಲಿ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಫ್ರೆಶರ್‌ಗಳಿಗೆ ವಾರ್ಷಿಕ 6.5 ಲಕ್ಷ ರೂಪಾಯಿಗಳ ಪ್ಯಾಕೇಜ್ ಅನ್ನು ಪಾವತಿಸುವುದಾಗಿ ವಿಪ್ರೋ ಭರವಸೆ ನೀಡಿತ್ತು. ಆದ್ರೀಗ ಫ್ರೆಶರ್‌ಗಳಿಗೆ ವಾರ್ಷಿಕ 3.5 ಲಕ್ಷ ರೂಪಾಯಿಗಳ ಪ್ಯಾಕೇಜ್ ಅನ್ನು ಮಾತ್ರ ಪಾವತಿಸಲು ಸಾಧ್ಯವಾಗುತ್ತದೆ ಎಂದು ಹೇಳಿದೆ. ಕಂಪನಿಯ ವೆಲಾಸಿಟಿ ಗ್ರ್ಯಾಡ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ವಿಪ್ರೋ ಫ್ರೆಶರ್‌ಗಳಿಗೆ ನವೀಕರಿಸಿದ ಕಡಿಮೆ-ಸಂಬಳದ ಆಫರ್ ಅನ್ನು ವಿತರಿಸಲಾಗಿದೆ.
ಕಂಪನಿ ಈ ಆಫರ್ ಅನ್ನು ಸ್ವೀಕರಿಸಲು ಅಭ್ಯರ್ಥಿಗಳ ಮೇಲೆ ಒತ್ತಡ ಹೇರುತ್ತಿಲ್ಲ. ಇಷ್ಟು ಕಡಿಮೆ ವೇತನದಲ್ಲಿ ತಂಡ ಸೇರಲು ಅವರು ಬಯಸುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ನಿರ್ದಿಷ್ಟ ಸಮಯವನ್ನು ನೀಡುತ್ತಿದೆ. ಈ ಬಗ್ಗೆ ಫ್ರೆಶರ್‌ಗಳಿಗೆ ಇಮೇಲ್ ಕೂಡ ರವಾನಿಸಿದೆ.
ಪ್ರತಿಭೆ ನಮ್ಮ ಅತ್ಯಮೂಲ್ಯ ಆಸ್ತಿ, ಪ್ರಸ್ತುತ ಮತ್ತು ಭವಿಷ್ಯದ ಉದ್ಯೋಗಿಗಳು ಯಶಸ್ವಿ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ಅವರ ಗುರಿಗಳನ್ನು ಸಾಧಿಸಲು ಸಾಧ್ಯವಾಗುವಂತಹ ವಾತಾವರಣವನ್ನು ಸೃಷ್ಟಿಸಲು ನಾವು ಬದ್ಧ. ಬದಲಾಗುತ್ತಿರುವ ಮ್ಯಾಕ್ರೋ ಪರಿಸರದ ಪರಿಣಾಮವಾಗಿ ವ್ಯವಹಾರದ ಅಗತ್ಯತೆಗಳಿಗೆ ತಕ್ಕಂತೆ ಬದಲಾವಣೆ ಮಾಡಲಾಗಿದೆ ಎಂದು ಈ ಬಗ್ಗೆ ವಿಪ್ರೋ ಸಮರ್ಥನೆಯನ್ನೂ ನೀಡಿದೆ.
ಕೊರೊನಾ ಸಾಂಕ್ರಾಮಿಕ ಇಡೀ ಜಗತ್ತಿನ ಆರ್ಥಿಕತೆಗೆ ದೊಡ್ಡ ಹೊಡೆತ ನೀಡಿದೆ. ಇದನ್ನೇ ಕಾರಣವಾಗಿಟ್ಟುಕೊಂಡು ಅನೇಕ ಐಟಿ ಕಂಪನಿಗಳು, ಸ್ಟಾರ್ಟಪ್‌ಗಳು ಉದ್ಯೋಗ ಕಡಿತ ಮಾಡುತ್ತವೇ ಇವೆ. ನೇಮಕಾತಿ ಯೋಜನೆಗಳನ್ನೂ ಫ್ರೀಝ್ ಮಾಡಿವೆ. ಕೆಲವು ಕಂಪನಿಗಳು ಸಂಬಳ ಕಡಿತಕ್ಕೆ ಮುಂದಾಗಿವೆ. ವಿಪ್ರೋ ಕೂಡ ಅದೇ ಸಾಲಿಗೆ ಸೇರ್ಪಡೆಯಾಗಿದೆ.