ಬೆಂಗಳೂರು: ಬಿಬಿಎಂಪಿ ಮಹಿಳಾ ಮಾಜಿ ಉಪಮೇಯರ್ ಓರ್ವರು ಫೇಸ್ ಬುಕ್ ಲೈವ್ ಗೆ ಬಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಪಾಲಿಕೆ ಮಾಜಿ ಉಪಮೇಯರ್ ಶಹತಾಜ್ ಖಾನಂ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿರುವ ಶಹತಾಜ್, ತನ್ನ ಪತಿ ತನಗೆ ತಲಾಖ್ ಕೊಡುವುದಾಗಿ ಹೇಳುತ್ತಿದ್ದಾರೆ. ಕಾನೂನು ರಚನೆಯಾಗಿದ್ದರೂ ನನಗೆ ನ್ಯಾಯ ಸಿಗುತ್ತಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.
ನನ್ನ ಪತಿ ಅನ್ವರ್ ಪಾಷಾ ಮನೆ ಅಳಿಯನಾಗಿದ್ದರೂ ನನ್ನ ಮೇಲೆ ಹಲ್ಲೆ ನಡೆಸುತ್ತಿದ್ದಾನೆ. ಅಲ್ಲದೇ ನನಗೆ ತಲಾಖ್ ನೀಡುವುದಾಗಿ ಹೇಳುತ್ತಿದ್ದಾನೆ. ಅನ್ಯಾಯದ ವಿರುದ್ಧ ಹೋರಾಡಲು ಪೊಲೀಸರು, ಕಾನೂನು ಮೊರೆ ಹೋದರೂ ಅನ್ವರ್ ವಿರುದ್ಧ ಕ್ರಮಕ್ಕೆ ಮುಂದಾಗುತ್ತಿಲ್ಲ. ಸಚಿವ ಭೈರತಿ ಬಸವರಾಜ್ ಹಾಗೂ ಎಂ ಎಲ್ ಸಿ ಹೆಚ್. ವಿಶ್ವನಾಥ್ ಅವರಿಂದಲೂ ನನಗೆ ಕಿರುಕುಳ ನೀಡಲಾಗುತ್ತಿದೆ. ನಾನು ಕಾನೂನು ಹೋರಾಟ ಮಾಡದಂತೆ ಅಡ್ಡಿಪಡಿಸುತ್ತಿದ್ದಾರೆ. ತ್ರಿಬಲ್ ತಲಾಖ್ ವಿರುದ್ಧ ಪ್ರಧಾನಿ ಮೋದಿಯವರು ಕಾನೂನು ಜಾರಿಗೆ ತಂದಿದ್ದರೂ ಕೂಡ ಓರ್ವ ಮಾಜಿ ಉಪಮೇಯರ್ ಆಗಿದ್ದ ನನಗೆ ನ್ಯಾಯ ಸಿಗುತ್ತಿಲ್ಲ. ತನಗೆ ನ್ಯಾಯ ದೊರಕಿಸಿಕೊಡುವಂತೆ ಕೈಮುಗಿದು ಕಣ್ಣೀರಿಟ್ಟಿದ್ದಾರೆ.