ಜೈಪುರ: ಫೇಸ್ ಬುಕ್ ನಲ್ಲಿ ಪರಿಚಯವಾದ ಗೆಳೆಯನ ಭೇಟಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ಸೀಮಾ ಹೈದರ್ ಬಗ್ಗೆ ತನಿಖೆ ನಡೆಯುತ್ತಿರುವಾಗಲೇ ಮಹಿಳೆಯೊಬ್ಬಳು ತನ್ನ ಸ್ನೇಹಿತನ ಭೇಟಿಗೆಂದು ಭಾರತದಿಂದ ಪಾಕಿಸ್ತಾನಕ್ಕೆ ತೆರಳಿದ ಘಟನೆ ಬೆಳಕಿಗೆ ಬಂದಿದೆ.
ರಾಜಸ್ಥಾನದ ಭಿವಾಡಿ ಜಿಲ್ಲೆಯ ವಿವಾಹಿತ ಮಹಿಳೆ ಅಂಜು, ಫೇಸ್ ಬುಕ್ ನಲ್ಲಿ ಪರಿಚಯವಾದ ಗೆಳೆಯನ ಭೇಟಿಗಾಗಿ ಅಂತರಾಷ್ಟ್ರೀಯ ಗಡಿ ದಾಟಿ ಪಾಕಿಸ್ತಾನಕ್ಕೆ ತೆರಳಿದ್ದಾರೆ. ಪಾಕಿಸ್ತಾನದ ವಾಯುವ್ಯ ಪ್ರಾಂತ್ಯದಲ್ಲಿರುವ ಖೈಬರ್ ಪಂಖ್ತುಂಕ್ವಾ ಗೆ ಪ್ರಯಾಣಿಸಿದ್ದಾಳೆ.
ಪತ್ನಿ ಪಾಕಿಸ್ತಾನಕ್ಕೆ ತೆರಳಿರುವ ಬಗ್ಗೆ ಪ್ರತಿಕ್ರಿಯಿಸಿರುವ ಪತಿ ಅರವಿಂದ್, ಕೆಲ ದಿನಗಳ ಹಿಂದಷ್ಟೇ ಅಂಜು ಜೈಪುರಕ್ಕೆ ತೆರಳಿದ್ದಳು. ಆದರೆ ಆಕೆ ಗಡಿ ದಾಟಿ ಪಾಕಿಸ್ತಾನಕ್ಕೆ ಹೋಗಿದ್ದಾಳೆ ಎಂಬುದು ಮಾಧ್ಯಮಗಳ ಮೂಲಕ ಗೊತ್ತಾಗಿದೆ. ನಾನು ಆಕೆಯೊಂದಿಗೆ ವಾಟ್ಸಪ್ ಸಂಪರ್ಕದಲ್ಲಿದ್ದೆ. ಭಾನುವಾರ ಸಂಜೆ 4 ಗಂಟೆಗೆ ಕರೆ ಮಾಡಿ ತಾನು ಲಾಹೋರ್ ನಲ್ಲಿದ್ದೇನೆ 2-3 ದಿನಗಳಲ್ಲಿ ವಾಪಸ್ ಬರುವುದಾಗಿ ತಿಳಿಸಿದ್ದಾಳೆ. ತನ್ನ ಪತ್ನಿ ವಾಪಸ್ ಬರುತ್ತಾಳೆ ಎಂಬ ನಂಬಿಕೆಯಿದೆ ಎಂದು ಹೇಳಿದ್ದಾರೆ.
ಇನ್ನು ಅರವಿಂದ್ ಹಾಗೂ ಅಂಜು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ. ಅರವಿಂದ್ ಭಿವಾಡಿಯಲ್ಲಿ ಕೆಲಸ ಮಾಡುತ್ತಿದ್ದು, ಅಂಜು ಖಾಸಗಿ ಸಂಸ್ಥೆಯಲ್ಲಿ ಡೇಟಾ ಎಂಟ್ರಿ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಳು. ಅಂಜು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡು ಅರವಿಂದ್ ನನ್ನು ವಿವಾಹವಾಗಿದ್ದು, ಅರವಿಂದ್ ಪತ್ನಿ ಅಂಜು, ಇಬ್ಬರು ಮಕ್ಕಳು ಹಾಗೂ ಅಂಜು ಸಹೋದರನೊಂದಿಗೆ ಭೀವಾಡಿಯಲ್ಲಿ ವಾಸವಾಗಿದ್ದಾರೆ.
ಕೆಲದಿನಗಳ ಹಿಂದೆ ಅಂಜುಗೆ ಫೇಸ್ ಬುಕ್ ನಲ್ಲಿ ಪಾಕಿಸ್ತಾನ ಮೂಲದ ನಸ್ರುಲ್ಲಾ ಪರಿಚಯವಾಗಿದ್ದು, ಅಂಜು ಕಳೆದ ಗುರುವಾರ ಜೈಪುರಕ್ಕೆ ಹೋಗುತ್ತೇನೆ ಎಂದು ಹೇಳಿ ಭಿವಾಡಿಯ ಮನೆಯಿಂದ ಹೊರಟಿದ್ದಾಳೆ. ಆದರೆ ಜೈಪುರಕ್ಕೆ ಹೋಗುತ್ತೇನೆ ಎಂದವಳು ಈಗ ನಸ್ರುಲ್ಲಾ ಭೇಟಿಗಾಗಿ ಪಾಕಿಸ್ತಾನದಲ್ಲಿರುವುದು ಅಚ್ಚರಿಗೆ ಕಾರಣವಾಗಿದೆ.