ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, ವೈದ್ಯರು, ದಾದಿಯರಲ್ಲಿಯೂ ಸೋಂಕು ಪತ್ತೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೊರೊನಾ ಸೋಂಕು ದೇಶ, ರಾಜ್ಯಗಳಲ್ಲಿ ಹೆಚ್ಚುತ್ತಲೇ ಇದೆ. ಕೊರೊನಾ ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅಗತ್ಯ. ಕೋವಿಡ್ ರೂಲ್ಸ್ ಈ ತಿಂಗಳಾಂತ್ಯದವರೆಗೂ ಮುಂದುವರೆಯಲಿದೆ ಎಂದರು.
ಜನರು ಹೆಚ್ಚು ಜಾಗೃತಿ ವಹಿಸಬೇಕು. ಲಸಿಕೆ ಬಗ್ಗೆ ನಿರ್ಲಕ್ಷ ಬೇಡ. ಎಲ್ಲರೂ ಕಡ್ಡಾಯವಾಗಿ ಎರಡನೇ ಡೋಸ್ ಲಸಿಕೆ ಪಡೆಯಬೇಕು. ಲಸಿಕೆ ಪಡೆಯದವರಲ್ಲಿ ಸೋಂಕು ಹೆಚ್ಚು ಪ್ರಭಾವ ಬೀರುತ್ತಿದೆ. ಕೊರೊನಾ ಮೂರನೇ ಅಲೆ ಇನ್ನೂ ಪೀಕ್ ಗೆ ಹೋಗಿಲ್ಲ. ಫೆಬ್ರವರಿ ಮೊದಲ ವಾರದಲ್ಲಿ ಉತ್ತುಂಗಕ್ಕೇರಲಿದೆ. ಫೆಬ್ರವರಿ 3-4ನೇ ವಾರದಲ್ಲಿ ಸೋಂಕು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹೇಳಿದರು.
ಶೇ.5ರಷ್ಟು ಸೋಂಕಿತರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ವೈದ್ಯರೂ, ದಾದಿಯರೂ ಕೂಡ ಸೋಂಕಿಗೆ ಒಳಗಾಗುತ್ತಿದ್ದಾರೆ. ಇದು ನಮಗೆ ಆತಂಕವನ್ನುಂಟುಮಾಡಿದೆ. ಲಾಕ್ ಡೌನ್ ಮೂಲಕ ಕೊರೊನಾ ನಿಯಂತ್ರಿಸಲು ಸಾಧ್ಯವಿಲ್ಲ. ಸಿಎಂಗಳ ಜತೆಗಿನ ಸಭೆಯಲ್ಲಿ ಪ್ರಧಾನಿ ಮೋದಿಯವರು ಕೂಡ ಇದನ್ನೇ ಹೇಳಿದ್ದಾರೆ. ಜನರಿಗೆ ತೊಂದರೆಯಾಗದಂತೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆ. ಅನಗತ್ಯ ಜನಜಂಗುಳಿ ಸೇರುವುದು, ಸಭೆ, ಸಮಾರಂಭಗಳನ್ನು ಮಾಡದಂತೆ ತಿಳಿಸಿದ್ದಾರೆ. ಸೋಂಕು ನಿಯಂತ್ರಣಕ್ಕೆ ಸಧ್ಯಕ್ಕೆ ಲಾಕ್ ಡೌನ್ ಮಾಡುವುದಿಲ್ಲ. ಆದರೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡುವ ಅಗತ್ಯವಿದೆ ಎಂದು ಹೇಳಿದರು.