ಉಷ್ಣವಲಯದ ಭೀಕರ ಚಂಡಮಾರುತ ಮೆಗಿ ಫಿಲಿಪೈನ್ಸ್‌ಗೆ ಅಪ್ಪಳಿಸಿದೆ. ಚಂಡಮಾರುತದ ಹೊಡೆತಕ್ಕೆ ಸಿಲುಕಿ 138 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ಭಾನುವಾರದಿಂದ್ಲೇ ಫಿಲಿಪೈನ್ಸ್‌ನ ಮಧ್ಯ ಮತ್ತು ದಕ್ಷಿಣ ಭಾಗಗಳಲ್ಲಿ ಮೆಗಿ ಚಂಡಮಾರುತದ ರೌದ್ರಾವತಾರ ಶುರುವಾಗಿತ್ತು.
ಪ್ರವಾಹ ಮತ್ತು ಭಾರೀ ಭೂಕುಸಿತದಿಂದ ಅನೇಕ ಪ್ರದೇಶಗಳು ಹಾನಿಗೊಳಗಾಗಿವೆ. ಲೇಟೆ ಪ್ರಾಂತ್ಯದಲ್ಲಿ ಚಂಡಮಾರುತದ ಆರ್ಭಟ ಹೆಚ್ಚಾಗಿತ್ತು. ಇಲ್ಲಿ 132 ಜನರು ಸಾವನ್ನಪ್ಪಿದ್ದಾರೆ. ಈ ನಗರದ ವಿವಿಧ ಗ್ರಾಮಗಳಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಿಲುಕಿಕೊಂಡು ಪ್ರಾಣ ಕಳೆದುಕೊಂಡಿದ್ದವರ ಪೈಕಿ 101 ಮೃತದೇಹಗಳನ್ನು ಈಗಾಗ್ಲೇ ಹೊರತೆಗೆಯಲಾಗಿದೆ.
ಲೇಟೆ ಪ್ರಾಂತ್ಯದ ಅಬುಯೋಗ್ ಪಟ್ಟಣದಲ್ಲಿ 31 ಮೃತದೇಹಗಳು, ಸಮರ್ ಪ್ರಾಂತ್ಯದಲ್ಲಿ ಒಂದು ಮತ್ತು ಸೆಬು ಪ್ರಾಂತ್ಯದಲ್ಲಿ ಎರಡು ಮೃತದೇಹಗಳು ಪತ್ತೆಯಾಗಿವೆ. ಮಧ್ಯ ಫಿಲಿಪೈನ್ಸ್‌ನ ಕ್ಯಾಪಿಜ್, ಅಕ್ಲಾನ್, ಆಂಟಿಕ್ ಮತ್ತು ಇಲೋಯಿಲೋ ಪ್ರಾಂತ್ಯಗಳಲ್ಲಿ 159 ಪ್ರದೇಶಗಳು ಸಂಪೂರ್ಣ ಮುಳುಗಡೆಯಾಗಿವೆ. ಕಳೆದ ಭಾನುವಾರ ಭೂಮಿಗೆ ಅಪ್ಪಳಿಸಿದ ಮೆಗಿ, ಈ ವರ್ಷ ಆಗ್ನೇಯ ಏಷ್ಯಾದ ದೇಶ ಪ್ರವೇಶಿಸಿದ ಮೊದಲ ಉಷ್ಣವಲಯದ ಚಂಡಮಾರುತವಾಗಿದೆ.
ಪೆಸಿಫಿಕ್ ಟೈಫೂನ್ ಬೆಲ್ಟ್‌ನಲ್ಲಿರುವ ಫಿಲಿಪೈನ್ಸ್ ದ್ವೀಪ ಸಮೂಹವು ಪ್ರತಿ ವರ್ಷ ಸುಮಾರು 20 ಟೈಫೂನ್ ಮತ್ತು ಚಂಡಮಾರುತಗಳಿಂದ ಜರ್ಜರಿತವಾಗ್ತಾ ಇದೆ. ಇದು ವಿಶ್ವದ ಅತ್ಯಂತ ವಿಪತ್ತು ಪೀಡಿತ ರಾಷ್ಟ್ರಗಳಲ್ಲಿ ಒಂದಾಗಿದೆ.