ಮಂಗಳೂರು: ಮಂಗಳೂರಿನ ಸುರತ್ಕಲ್ ನಲ್ಲಿ ನಡೆದಿದ್ದ ಮೊಹಮ್ಮದ್ ಫಾಜಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನಷ್ಟು ವಿಚಾರಣೆಗಾಗಿ ಕಸ್ಟಡಿಗೆ ಪಡೆದುಕೊಳ್ಳಲಿದ್ದೇವೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ಆಯುಕ್ತರು, ಸುರತ್ಕಲ್ ನಲ್ಲಿ ನಡೆದಿದ್ದ ಫಾಜಿಲ್ ಹತ್ಯೆ ಪ್ರತೀಕಾರಕ್ಕಾಗಿ ಮಾಡಿದ ಕೊಲೆಯಾಗಿದೆ. ಕೊಲೆ ಮಾಡುವ ಉದ್ದೇಶಕ್ಕಾಗಿಯೇ 6 ಜನರ ಗುಂಪು ಎರಡು ದಿನಗಳ ಕಾಲ ಸಂಚು ರೂಪಿಸಿತ್ತು ಎಂದು ತಿಳಿಸಿದ್ದಾರೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಬಳಿಕ ಯಾರನ್ನಾದರೂ ಕೊಲೆ ಮಾಡಬೇಕು ಎಂದು ಸುಹಾಸ್ ಶೆಟ್ಟಿ ಹೇಳಿದ್ದ. ಆಗ ಫಾಜಿಲ್ ಹೆಸರು ಪ್ರಸ್ತಾಪವಾಗಿದೆ. ಫಾಜಿಲ್ ಬಗ್ಗೆ ಚರ್ಚೆ ಮಾಡಿ ಹತ್ಯೆಗೆ ಸಂಚು ರೂಪಿಸಿದ್ದರು. ಫಾಜಿಲ್ ಚಲನವಲನಗಳನ್ನು ಫಾಲೋ ಮಾಡಿದ್ದ ಹಂತಕರು ಕಾರಿನಲ್ಲಿ ಬಂದು ಕೊಲೆ ಮಾಡಿದ್ದಾರೆ. ಕೊಲೆಗಾಗಿ ಸುಹಾಸ್ ಶೆಟ್ಟಿ ಮಾರಕಾಸ್ತ್ರಗಳನ್ನು ತಂದಿದ್ದ.
ಸುಹಾಸ್, ಮೋಹನ್, ಅಭಿ ಮೂವರು ಫಾಜಿಲ್ ಮೇಲೆ ಹಲ್ಲೆ ನಡೆಸಿದ್ದಾರೆ. ಕಾರು ಚಾಲಕ ಗಿರಿ, ದೀಕ್ಷಿತ್ ಕಾರಿನಲ್ಲಿಯೇ ಕುಳಿತಿದ್ದರು. ಶ್ರೀನಿವಾಸ್ ಎಂಬಾತ ಆರೋಪಿಗಳ ಕವರಿಂಗ್ ಮಾಡಲು ನಿಂತಿದ್ದ. ಇಂದು ಮುಂಜಾನೆ ಉದ್ಯಾರ ಬಳಿ ಈ 6 ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ ಯಾವ ಸೇಡಿಗಾಗಿ ಕೊಲೆ ಮಾಡಿದ್ದಾರೆ, ಪ್ರತೀಕಾರದ ಉದ್ದೇಶವೇನು ಎಂಬ ಬಗ್ಗೆ ಇನ್ನಷ್ಟೇ ತನಿಖೆ ನಡೆಯಬೇಕಿದೆ ಎಂದು ತಿಳಿಸಿದರು.