
ಪ್ರೇಮಿಗಳ ದಿನವನ್ನು ಆಚರಿಸುವ ಬದಲು ಫೆಬ್ರವರಿ14ರಂದು ಕೌ ಹಗ್ ಡೇ ಆಚರಿಸಿ ಎಂದು ಭಾರತೀಯ ಪ್ರಾಣಿ ರಕ್ಷಣಾ ಮಂಡಳಿ ಒತ್ತಾಯಿಸಿದೆ. ಭಾರತೀಯ ಸಂಸ್ಕೃತಿ ಮತ್ತು ಗ್ರಾಮೀಣ ಆರ್ಥಿಕತೆಯಲ್ಲಿ ಗೋವಿನ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುವ ಹಿನ್ನೆಲೆಯಲ್ಲಿ ವ್ಯಾಲಂಟೈನ್ ಡೇ ಬದಲು ಕೌ ಹಗ್ ಡೇ ಆಚರಿಸಬೇಖು. ಇದು ಜನರಿಗೆ ಭಾವನಾತ್ಮಕ ಶ್ರೀಮಂತಿಕೆ ಮತ್ತು ಸಂತೋಷವನ್ನು ಉಂಟುಮಾಡುತ್ತದೆ ಎಂದು ಮಂಡಳಿ ಹೇಳಿದೆ. ಯೋಗ ದಿನದಂತೆಯೇ, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ಭಾರತೀಯ ಪ್ರಾಣಿ ರಕ್ಷಣಾ ಮಂಡಳಿಯ ಸಹಯೋಗದೊಂದಿಗೆ ಭಾರತೀಯ ಸಂಸ್ಕೃತಿಯನ್ನು ಉತ್ತೇಜಿಸಲು ‘ಕೌ ಹಗ್ ಡೇ’ ಆಚರಿಸಲು ಮುಂದಾಗಿದೆ.
“ಎಲ್ಲಾ ಗೋ ಪ್ರೇಮಿಗಳು ಫೆಬ್ರವರಿ 14 ಅನ್ನು ಕೌ ಹಗ್ ಡೇಯನ್ನಾಗಿ ಆಚರಿಸಬಹುದು. ಗೋಮಾತೆಯ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಈ ದಿನ ಆಚರಿಸಿದರೆ ಜೀವನದಲ್ಲಿ ಸಂತೋಷ ಮತ್ತು ಸಕಾರಾತ್ಮಕ ಶಕ್ತಿ ತುಂಬಿಕೊಳ್ಳುತ್ತದೆ” ಎಂದು ಮಂಡಳಿ ಹೇಳಿದೆ. ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ವೈದಿಕ ಸಂಪ್ರದಾಯಗಳು ಬಹುತೇಕ ಅಳಿವಿನ ಅಂಚಿನಲ್ಲಿವೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ. ದೇಶದ ಪರಂಪರೆಯನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಕೌ ಹಗ್ ಡೇ ಅನ್ನು ಆಚರಿಸುವಂತೆ ಮಂಡಳಿ ಮನವಿ ಮಾಡಿದೆ.
ಈ ದಿನವನ್ನು ಆಚರಿಸುವ ಉದ್ದೇಶ, ಭಾರತೀಯ ಸಂಸ್ಕೃತಿಯ ಬಗ್ಗೆ ಅರಿಯಲು ಜನರನ್ನು ಉತ್ತೇಜಿಸುವುದಾಗಿದೆ. ಗೋವುಗಳ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ನಿಧಾನವಾಗಿ ತಮ್ಮ ಸಂಪ್ರದಾಯಗಳಿಂದ ದೂರ ಸರಿಯುತ್ತಿರುವವರನ್ನು ಮರಳಿ ಕರೆತರುವುದು ಇದರ ಗುರಿ ಎಂದು ಮಂಡಳಿಯ ಕಾನೂನು ಸಲಹೆಗಾರ ಬಿಕ್ರಮ್ ಚಂದ್ರವಂಶಿ ಹೇಳಿದ್ದಾರೆ.
ಈ ಮಧ್ಯೆ ಉತ್ತರಪ್ರದೇಶದಲ್ಲಿ ಗೌತಮ್ ಬುದ್ಧ ನಗರ ಪೊಲೀಸರು ನೋಯ್ಡಾ ಮತ್ತು ಗ್ರೇಟರ್ ನೋಯ್ಡಾ ಪ್ರದೇಶಗಳಲ್ಲಿ ಫೆಬ್ರವರಿ 4 ರಿಂದ ಫೆಬ್ರವರಿ 28 ರವರೆಗೆ ಪ್ರೇಮಿಗಳ ದಿನ ಮತ್ತು ಶಿವರಾತ್ರಿಯನ್ನು ಗಮನದಲ್ಲಿಟ್ಟುಕೊಂಡು ಸೆಕ್ಷನ್ 144ರ ಅಡಿ ನಿರ್ಬಂಧಗಳನ್ನು ವಿಧಿಸಿದ್ದಾರೆ. ಸಮಾಜಘಾತುಕರು ಶಾಂತಿ ಕದಡುವ ಸಾಧ್ಯತೆಗಳಿದ್ದು ಅದನ್ನು ತಡೆಯಲು ಈ ನಿರ್ಧಾರ ಕೈಗೊಳ್ಳಲಾಗಿದೆ.