ಬಳ್ಳಾರಿ: ಪ್ರಿಯಾಂಕ್ ಖರ್ಗೆ ಲಂಚ-ಮಂಚ ಹೇಳಿಕೆ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದು, ಇದು ಪ್ರಿಯಾಂಕ್ ಖರ್ಗೆ ಅವರ ಸಂಸ್ಕೃತಿಯನ್ನು ತೋರುತ್ತದೆ ಎಂದು ಕಿಡಿಕಾರಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ಪ್ರಿಯಾಂಕ್ ಖರ್ಗೆಯವರು ತಮ್ಮ ತಂದೆಯನ್ನು ನೋಡಿ ಸಂಸ್ಕಾರ ಬೆಳೆಸಿಕೊಳ್ಳಲಿ. ಇಂತಹ ಹೇಳಿಕೆಗಳು ಶೋಭೆ ತರಲ್ಲ ಎಂದು ಹೇಳಿದರು.
ಪ್ರಿಯಾಂಕ್ ಖರ್ಗೆ ಅವರನ್ನು ಸಂಸ್ಕಾರವಂತ ಎಂದುಕೊಂಡಿದ್ದೆ. ಈ ಹಿಂದೆ ಸದನದಲ್ಲಿಯೂ ಸಣ್ಣ ಖರ್ಗೆ ಎಂದು ಉಲ್ಲೇಖಿಸಿದ್ದೆ. ಆದರೆ ಅವರು ಲಂಚ-ಮಂಚದ ಹೇಳಿಕೆ ನೀಡಿದ್ದನ್ನು ಕೇಳಿ ಬೇಸರವಾಯಿತು. ಪ್ರಿಯಾಂಕ್ ಖರ್ಗೆ ಮೊದಲು ಮಹಿಳೆಯರ ಕ್ಷಮೆ ಯಾಚಿಸಲಿ. ಜತೆಗೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ನೋಡಿ ಕಲಿತುಕೊಳ್ಳಲಿ. ಶಕ್ತಿ ಇದ್ದರೆ ಚುನಾವಣೆಯಲ್ಲಿ ಗೆಲ್ಲಲು ಯತ್ನಿಸಿ ಅದನ್ನು ಬಿಟ್ಟು ಈ ರೀತಿ ಮಹಿಳೆಯ ವಿರುದ್ಧ ಇಂತಹ ಮಾತುಗಳನ್ನು ಬಳಸಬಾರದು ಎಂದು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.