ಬೆಂಗಳೂರು: ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಶಿಕ್ಷಕರ ನೇಮಕಾತಿ ಪರೀಕ್ಷೆ ಮೇಲೆ ಶಿಕ್ಷಣ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು, ಟಫ್ ರೀಲ್ಸ್ ಜಾರಿ ಮಾಡಿದೆ.
15,000 ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗಾಗಿ ಮೇ 21ರಿಂದ ಎರಡು ದಿನಗಳ ಕಾಲ ನಡೆಯಲಿರುವ ಪರೀಕ್ಷೆಗೆ ವ್ಯಾಪಕ ಭದ್ರತೆ ಕೈಗೊಳ್ಳಲಾಗುತ್ತಿದ್ದು, ಪರೀಕ್ಷಾ ಕೇಂದ್ರದ ಸುತ್ತಮುತ್ತಲು ಜಾರಿಗೊಳಿಸುವ ನಿಷೇಧಾಜ್ಞೆ ವ್ಯಾಪ್ತಿಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ. ಅಭ್ಯರ್ಥಿಗಳ ಹೊರತಾಗಿ ಯಾರಿಗೂ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ಇಲ್ಲ. ಕೆಲ ಪ್ರದೇಶಗಳಲ್ಲಿ ಮೆಟಲ್ ಡಿಟೆಕ್ಟಿವ್ ಅಳವಡಿಸಲು ನಿರ್ಧರಿಸಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಪ್ರಶ್ನೆ ಪತ್ರಿಕೆ ಗೌಪ್ಯತೆ, ಪರೀಕ್ಷೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಸಿಸಿಟಿವಿ ಅಳವಡಿಸಲಾಗುವುದು. ಅಭ್ಯರ್ಥಿಗಳು ಕೈಗೆ ವಾಚ್ ಕಟ್ಟಿಕೊಂಡು ಪರೀಕ್ಷೆಗೆ ಹೋಗುವಂತಿಲ್ಲ. ಬ್ಲೂಟೂತ್, ಸ್ಮಾರ್ಟ್ ಬ್ಯಾಂಡ್ ಬಳಕೆಗೂ ಅವಕಾಶವಿಲ್ಲ. ಪರೀಕ್ಷಾ ಕೊಠಡಿಯಲ್ಲಿ ಗೋಡೆಗಡಿಯಾರ ಅಳವಡಿಸಲಾಗುತ್ತದೆ. ಪರೀಕ್ಷಾ ಕೇಂದ್ರದ ಸುತ್ತ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗುತ್ತದೆ ಎಂದು ತಿಳಿಸಿದರು.