ಬೆಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಈಗಾಗಲೇ 15 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವರು, ನಾವು ಎಲ್ಲಾ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಸಧ್ಯ ಮಂಗಳೂರಿನಲ್ಲಿ ಶಾಂತಿ ವಾತಾವರಣವಿದೆ. ಯಾವುದೇ ಗಲಭೆ ನಡೆಯುತ್ತಿಲ್ಲ. ಪ್ರವೀಣ್ ನೆಟ್ಟಾರು ನಿಷ್ಠಾವಂತ ಬಿಜೆಪಿ ಕಾರ್ಯಕರ್ತ. ಹೀಗಾಗಿ ಪದಾಧಿಕಾರಿಗಳಲ್ಲಿ, ಕಾರ್ಯಕರ್ತರಲ್ಲಿ ಆಕ್ರೋಶ ಸಹಜ. ರಾಜೀನಾಮೆ ಕೊಟ್ಟರೂ ಸಿದ್ಧಾಂತದಿಂದ ಹೊರಹೋಗಲು ಸಾಧ್ಯವಿಲ್ಲ ಎಂದರು.
ಪ್ರವೀಣ್ ನೆಟ್ಟಾರು ಮನೆ ಸಮೀಪವೇ ಕೇರಳಿಗರ ಮನೆಯಿದೆ. ಆಗಾಗ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಹೀಗಾಗಿ ಕೇರಳ ಹಾಗೂ ಕರ್ನಾಟಕ ಎರಡೂ ರಾಜ್ಯಗಳ ಪೊಲೀಸರು ಜಂಟಿಯಾಗಿ ತನಿಖೆ ನಡೆಸಿದ್ದಾರೆ. ಜಂಟಿ ತನಿಖೆಯಿಂದ ಮಾತ್ರ ಆರೋಪಿಗಳಿಗೆ ಶಿಕ್ಷೆ ಸಿಗಲಿದೆ ಎಂದರು.
ಆರೋಪಿಗಳನ್ನು ಗಲ್ಲಿಗೇರಿಸುವಷ್ಟು ಆಕ್ರೋಶವಿರುವುದು ನಿಜ. ಹಾಗೆಂದು ಆರೋಪಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಲು ಸಾಧ್ಯವಿಲ್ಲ. ಇದು ತಾಲಿಬಾನ್ ಅಲ್ಲ, ಆರೋಪಿಗಳಿಗೆ ಶಿಕ್ಷೆ ನೀಡಲಾಗದ ಅಸಹಾಯಕತೆ ಸರ್ಕಾರದಲ್ಲಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅನೇಕ ಮತಾಂಧ ಸಂಘಟನೆಗಳ ಮೇಲೆ ಅನುಮಾನವಿದೆ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.