ಮಂಗಳೂರು: ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ನಿವಾಸಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿದ ಸಚಿವೆ ಶೋಭಾ ಕರಂದ್ಲಾಜೆ, ಕುಟುಂಬ ಸದಸ್ಯರ ದುಃಖ ಆಲಿಸಿದರು. ಈ ವೇಳೆ ಪ್ರವೀಣ್ ಪತ್ನಿ ಹಾಗೂ ಮನೆಯವರು ತಮಗೆ ನ್ಯಾಯ ಕೊಡಿಸುವಂತೆ ಕಣ್ಣೀರಿಟ್ಟಿದ್ದಾರೆ.
ಈ ವೇಳೆ ಶೋಭಾ ಕರಂದ್ಲಾಜೆ, ಪ್ರವೀಣ್ ನೆಟ್ಟಾರು ಕುಟುಂಬದವರಿಗೆ 5 ಲಕ್ಷ ರೂಪಾಯಿ ನಗದು, ತಮ್ಮ ಒಂದು ತಿಂಗಳ ಸಂಬಳದ ಚೆಕ್ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಶೋಭಾ ಕರಂದ್ಲಾಜೆ, ಪ್ರವೀಣ್ ನೆಟ್ಟಾರು ಸಾವು ಅತೀವ ದುಃಖ ತಂದಿದೆ. ಹಲವರ ಸಮಸ್ಯೆ, ಕಷ್ಟಗಳಿಗೆ ಪ್ರವೀಣ್ ಸ್ಪಂದಿಸುತ್ತಿದ್ದ. ಆದರೆ ಈಗ ಆತ ಇಲ್ಲ ಎನ್ನುವುದು ಸಂಕಟವಾಗುತ್ತಿದೆ. ಪ್ರಕರಣದ ತನಿಖೆ ಎನ್ ಐ ಎ ಗೆ ಒಪ್ಪಿಸಲಾಗಿದೆ. ಶೀಘ್ರದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ, ಕಠಿಣ ಶಿಕ್ಷೆ ಕೊಡುವ ಭರವಸೆಯಿದೆ ಎಂದು ಹೇಳಿದರು.