ಬೆಂಗಳೂರು: ನೂತನ ಶಾಸಕರ ಪ್ರಮಾಣವಚನ ವಿಚಾರದಲ್ಲಿಯೂ ಆಡಳಿತ ಪಕ್ಷ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ನಾಯಕರ ನಡುವೆ ಕೆಸರೆರಚಾಟ ಆರಂಭವಾದಂತಿದೆ. ಪ್ರಮಾಣವಚನ ಸ್ವೀಕಾರಕ್ಕೆಂದು ವಿಧಾನಸೌಧಕ್ಕೆ ಆಗಮಿಸಿದ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಮಾನೆ ನಿರಾಸೆಯಿಂದ ಹಿಂತಿರುಗಿದ ಪ್ರಸಂಗ ನಡೆದಿದೆ.
ಹಾನಗಲ್ ಉಪಚುನಾವಣೆಯಲ್ಲಿ ವಿಜಯ ಸಾಧಿಸಿದ ಕಾಂಗ್ರೆಸ್ ನ ಶ್ರೀನಿವಾಸ್ ಮಾನೆ ಪ್ರಮಾಣವಚನ ಸ್ವೀಕಾರಕ್ಕೆಂದು ವಿಧಾನಸೌಧದ ಸ್ಪೀಕರ್ ಚೇಂಬರ್ ಗೆ ಆಗಮಿಸಿದ್ದಾರೆ. ಮಾನೆ ಜೊತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಇನ್ನಿತರ ಕಾಂಗ್ರೆಸ್ ಮುಖಂಡರು ಆಗಮಿಸಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗಾಗಿ ಕಾದು ಕುಳಿತಿದ್ದಾರೆ. ಆದರೆ ಎಷ್ಟು ಹೊತ್ತಾದರೂ ಚೇಂಬರ್ ನತ್ತ ಸ್ಪೀಕರ್ ಸುಳಿವೇ ಇರಲಿಲ್ಲ. ಇದರಿಂದ ಕಾದು ಕಾದು ಸುಸ್ತಾದ ಕಾಂಗ್ರೆಸ್ ನಾಯಕರು ಸಿಡಿಮಿಡಿಗೊಂಡಿದ್ದಾರೆ.
ಕೆಲ ಸಮಯದ ಬಳಿಕ ಸ್ಪೀಕರ್ ಕಾಗೇರಿ ಇಂದು ಶ್ರೀನಿವಾಸ್ ಮಾನೆಗೆ ಪ್ರಮಾಣವಚನ ಬೋಧಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಮೂಲಕ ಶ್ರೀನಿವಾಸ್ ಮಾನೆಗೆ ಸ್ಪೀಕರ್ ಕಾಗೇರಿ ಮಾಹಿತಿ ರವಾನಿಸಿದ್ದು, ಬೇರೊಂದು ದಿನ ಪ್ರಮಾಣ ವಚನಕ್ಕೆ ದಿನ ನಿಗದಿ ಮಾಡಿ ತಿಳಿಸುವುದಾಗಿ ಹೇಳಿದ್ದಾರೆ. ಇದರಿಂದ ಅಸಮಾಧಾನಗೊಂಡಿರುವ ಕಾಂಗ್ರೆಸ್ ನಾಯಕರು, ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿ ಸೋಲನುಭವಿಸಿದ್ದಕ್ಕೆ ಸ್ಪೀಕರ್ ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.