ಪ್ರಧಾನಿ ನರೇಂದ್ರ ಮೋದಿಯವರು ಜೂನ್ 20 ಹಾಗೂ 21 ರಂದು ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಂಡಿದ್ದು, ಮೋದಿಯವರ ಭೇಟಿ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಭರ್ಜರಿ ಸಿದ್ಧತೆಯಲ್ಲಿ ತೊಡಗಿಕೊಂಡಿದೆ.
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವುದರಿಂದ ನರೇಂದ್ರ ಮೋದಿಯವರ ಈ ಭೇಟಿಯನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದು, ಭಾರಿ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.
ಜೂನ್ 20 ರ ಬೆಳಿಗ್ಗೆ 11-55ಕ್ಕೆ ವಿಶೇಷ ವಿಮಾನದ ಮೂಲಕ ಬೆಂಗಳೂರಿನ ಯಲಹಂಕ ವಾಯುನೆಲೆಗೆ ಬಂದಿಳಿಯುವ ಮೋದಿಯವರು ಬಳಿಕ ರಸ್ತೆ ಮಾರ್ಗದ ಮೂಲಕ ಭಾರತೀಯ ವಿಜ್ಞಾನ ಸಂಸ್ಥೆಗೆ ಆಗಮಿಸಲಿದ್ದಾರೆ.
ಅಲ್ಲಿನ ಕಾರ್ಯಕ್ರಮದ ಬಳಿಕ ಹೆಲಿಕಾಪ್ಟರ್ ಮೂಲಕ ಕೊಮ್ಮಘಟ್ಟಕ್ಕೆ ತೆರಳಲಿರುವ ಪ್ರಧಾನಿಯವರು ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮಧ್ಯಾಹ್ನ 2.30 ರ ಸುಮಾರಿಗೆ ಬೆಂಗಳೂರು ವಿವಿ ಜ್ಞಾನಭಾರತಿ ಆವರಣದಲ್ಲಿರುವ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಸಂಸ್ಥೆಗೆ ಆಗಮಿಸಲಿದ್ದು, ಅಲ್ಲಿ ಅಂಬೇಡ್ಕರ್ ಪ್ರತಿಮೆ ಅನಾವರಣ ಮತ್ತು ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ.
ಸಂಜೆ 3-50 ಕ್ಕೆ ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ತೆರಳಲಿರುವ ನರೇಂದ್ರ ಮೋದಿಯವರು ಮರುದಿನ ಅಂದರೆ ಜೂನ್ 21 ಆಯೋಜಿಸಿರುವ ವಿಶ್ವ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.