ಬೆಂಗಳೂರು: ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಬೆಂಗಳೂರಿನಲ್ಲಿ ಅಬ್ಬರದ ರೋಡ್ ಶೋ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲವೆಡೆ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿಷೇಧಿಸಲಾಗಿದೆ.
ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಮಾಡಲಿರುವ ಪ್ರಧಾನಿ ಮೋದಿ 6 ಸಮಾವೇಶ, 2 ರೋಡ್ ಶೋ ನಡೆಸಲಿದ್ದಾರೆ. ಪ್ರಧಾನಿ ಮೋದಿ ರೋಡ್ ಶೋ ನಲ್ಲಿ 2 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಮಾಗಡಿ ರಸ್ತೆಯ ನೈಸ್ ಜಂಕ್ಷನ್ ನಿಂದ ಸುಮನಹಳ್ಳಿ ಸರ್ಕಲ್ ವರೆಗೂ ನರೇಂದ್ರ ಮೋದಿ ರೋಡ್ ಶೋ ನಡೆಸಲಿದ್ದಾರೆ. ರೋಡ್ ಶೋ ನಡೆಸುವ ಸುತ್ತಮುತ್ತಲ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಇಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 7:30ರ ವರೆಗೆ ಸಂಚಾರ ನಿರ್ಬಂಧಿಸಲಾಗಿದೆ.
ಓಲ್ಡ್ ಏರ್ ಪೋರ್ಟ್ ರಸ್ತೆ, ಕಬ್ಬನ್ ರಸ್ತೆ, ಅಂಬೇಡ್ಕರ್ ರಸ್ತೆ, ದೇವಾಂಗ ರಸ್ತೆ, ಕೇಂಬ್ರಿಡ್ಜ್ ಲೇಔಟ್ ರಸ್ತೆ, ಡಿಕನ್ ಸನ್ ರಸೆ, ಲಾಲ್ ಬಾಗ್ ವೆಸ್ಟ್ ಗೇಟ್ ರಸ್ತೆ, ಕೆ ಆರ್ ಸರ್ಕಲ್, ಆರ್ ವಿ ಕಾಲೇಜು ರಸ್ತೆ, ಲಾಲ್ ಬಾಗ್ ಮುಖ್ಯ ರಸ್ತೆ, ಬಸವನಗುಡಿ 50 ಅಡಿ ರಸ್ತೆ, ಕೆನರಾ ಬ್ಯಾಂಕ್ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಮಾಗಡಿಯಿಂದ ಬೆಂಗಳೂರು ಸಂಚರಿಸುವವರು ತಾವರೆಕೆರೆ ಜಂಕ್ಷನ್ ನಲ್ಲಿ ಬಲ ತಿರುವು ಪಡೆದು ಹೆಮ್ಮಿಗೆಪುರ, ಕೊಮ್ಮಘಟ್ಟ ಕೆಂಗೇರಿ ಮೂಲಕ ಮೈಸೂರು ರಸ್ತೆಗೆ ಸಂಚರಿಸಬಹುದಾಗಿದೆ. ಮಾಗಡಿ ರಸ್ತೆಯಿಂದ ತುಮಕೂರು ಕಡೆ ತೆರಳುವವರು ತಾವರೆಕೆರೆ ಜಂಕ್ಷನ್ ನಲ್ಲಿ ಎಡತಿರುವು ಪಡೆದು ಸೊಂಡೆಕೊಪ್ಪ ನೆಲಮಂಗಲ ಮೂಲಕ ಸಂಚರಿಸಬಹುದು.