ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಇಂದು ರಾಜ್ಯಕ್ಕೆ ಆಗಮಿಸುತ್ತಿದ್ದು, ಎರಡು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿ ಮೋದಿ ಅಗಮನಕ್ಕು ಮುನ್ನ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆಗಳನ್ನು ಮುಂದಿಟ್ಟಿದ್ದು, ತಮ್ಮ ಪ್ರಶ್ನೆಗಳಿಗೆ ಉತ್ತರಿಸುವಂತೆ ಹೇಳಿದ್ದಾರೆ.
ರೈತರ ಪ್ರತಿರೋಧಕ್ಕೆ ಮಣಿದು ಕೃಷಿ ಕಾಯ್ದೆಯನ್ನು ವಾಪಸ್ ಪಡೆಯಲಾಗಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ಇಲ್ಲಿಯವರೆಗೂ ವಾಪಸ್ ಪಡೆದಿಲ್ಲ. ಇದು ನಿಮ್ಮ ಸೂಚನೆಯೇ? ಅಥವಾ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯೇ? ಎಂದು ಪ್ರಶ್ನಿಸಿದ್ದಾರೆ.
ಮೇಕೆದಾಟು ಯೋಜನೆಗೆ ವಿಳಂಬ ಮಾಡುತ್ತಿರುವುದು ಯಾಕೆ? ಇದಕ್ಕೆ ಕಾರಣ ತಮಿಳುನಾಡು ಸರ್ಕಾರದ ಒತ್ತಡವೇ? ಅಥವಾ ಕರ್ನಾಟಕದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಇರುವ ಪೂರ್ವಾಗ್ರಹವೇ? ಎಂದು ಕೇಳಿದ್ದಾರೆ.
ಗೃಹ ಸಚಿವ ಅಮಿತ್ ಶಾ ರಾಜ್ಯಗಳ ಮೇಲೆ ಹಿಂದಿ ಹೇರಲು ಹೊರಟಿದ್ದಾರೆ. ಮೋದಿಯವರೇ ಕನ್ನಡದ ಅಸ್ಮಿತೆ ಬಗ್ಗೆ ನಿಮ್ಮ ನಿಲುವೇನು? ನಿಮ್ಮ ಮೌನ ಅಮಿತ್ ಶಾ ಹೇಳಿಕೆಗೆ ಸಹಮತವೇ? ಬೆಂಗಳೂರು ಉಪನಗರ ರೈಲು ಯೋಜನೆ ನೆನೆಗುದಿಗೆ ಬೀಳಲು ಕೇಂದ್ರ ಸರ್ಕಾರದ ನಿರ್ಲಕ್ಷ ಕಾರಣವಲ್ಲವೇ? ಈ ಯೋಜನೆ ಚಾಲನೆ ಇಷ್ಟೊಂದು ವಿಳಂಬವಾಗಲು ಕೇಂದ್ರ ಹೊಣೆಯಲ್ಲವೇ? ಎಂದು ಪ್ರಶ್ನಿಸಿದ್ದಾರೆ.