ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವುದಾಗಿ ಮುಂಬೈ ಸಂಚಾರ ಪೊಲೀಸರಿಗೆ ಬೆದರಿಕೆ ಕರೆ ಬಂದಿದೆ. ಈ ಫೋನ್ ಕಾಲ್‌ನಿಂದಾಗಿ ಕೋಲಾಹಲವೇ ಉಂಟಾಯ್ತು. ಫೋನ್ ಕರೆ ಮಾತ್ರವಲ್ಲದೆ ಮುಂಬೈ ಟ್ರಾಫಿಕ್ ಪೊಲೀಸರಿಗೆ ಈ ರೀತಿಯ ಬೆದರಿಕೆ ಮೆಸೇಜ್ ಕೂಡ ಕಳಿಸಲಾಗಿದೆ. ಈ ಬಗ್ಗೆ ಮುಂಬೈನ ವರ್ಲಿ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಾಗಿದೆ. ಪೊಲೀಸರು ಬೆದರಿಕೆ ಕರೆ ಹಾಗೂ ಸಂದೇಶ ಕಳಿಸಿದವರನ್ನು ಪತ್ತೆ ಮಾಡಲು ಕಾರ್ಯನಿರತರಾಗಿದ್ದಾರೆ.
ಸೈಬರ್ ತಂಡವನ್ನೂ ಅಲರ್ಟ್ ಮಾಡಲಾಗಿದೆ. ಈ ಕರೆ ಎಲ್ಲಿಂದ ಬಂದಿದೆ ಎಂಬುದನ್ನು ಪತ್ತೆ ಮಾಡಲು ಪೊಲೀಸರು ಮೊಬೈಲ್ ಸಂಖ್ಯೆ ಮತ್ತು ಬಳಕೆದಾರರ ಐಡಿಯನ್ನು ಟ್ರ್ಯಾಕ್ ಮಾಡ್ತಿದ್ದಾರೆ. ಪೊಲೀಸ್ ತಂಡವು ಅಲರ್ಟ್ ಮೋಡ್‌ನಲ್ಲಿದ್ದು, ಬೆದರಿಕೆ ಹಾಕಿದ ವ್ಯಕ್ತಿಗಾಗಿ ಶೋಧ ನಡೆಸ್ತಿದೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರನ್ನು ಶೀಘ್ರವೇ ಹಿಡಿಯಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮುಂಬೈ ಟ್ರಾಫಿಕ್ ಪೊಲೀಸರಿಗೆ ಬಂದಿರುವ ಈ ಬೆದರಿಕೆ ಕರೆ ‘ಡಿ ಕಂಪನಿ’ಯಿಂದ ಇರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದರ ಆಡಿಯೋ ಕ್ಲಿಪ್‌ಗಳೂ ಸಿಕ್ಕಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಧಾನಿ ಮೋದಿ ಅವರನ್ನು ಕೊಲ್ಲುವುದಾಗಿ ಬೆದರಿಕೆ ಕರೆ ಬರುತ್ತಿದ್ದಂತೆ, ಮಾಹಿತಿಯನ್ನು ಮುಂಬೈನ ವರ್ಲಿ ಪೊಲೀಸ್ ಠಾಣೆಗೆ ರವಾನಿಸಲಾಯ್ತು. ಬಳಿಕ ವರ್ಲಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ತನಿಖೆಗೆ ಸೈಬರ್ ಸೆಲ್‌ನ ಸಹಾಯವನ್ನೂ ಪಡೆಯಲಾಗಿದೆ. ಕ್ರೈಂ ಬ್ರಾಂಚ್ ಕೂಡ ಆರೋಪಿಗಳ ಪತ್ತೆಗೆ ಶ್ರಮಿಸುತ್ತಿದೆ.