ಬೆಂಗಳೂರು: ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ ಮಾಜಿ ಪ್ರಧಾನಿ ದೇವೇಗೌಡರಿಗೆ ಆಹ್ವಾನಿಸದ ರಾಜ್ಯ ಬಿಜೆಪಿ ಸರ್ಕಾರದ ಕ್ರಮವನ್ನು ಖಂಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಿಜೆಪಿಯವರಿಗೆ ಶಿಷ್ಟಾಚಾರವೂ ಗೊತ್ತಿಲ್ಲ, ಏನೂ ಗೊತ್ತಿಲ್ಲ. ಅವರ ರೀತಿ ನೀತಿ ಅವರಿಗೆ ಬಿಟ್ಟವಿಚಾರ ಅವರಿಗೆ ಅರ್ಥವಾಗಬೇಕು ಎಂದು ಕಿಡಿಕಾರಿದರು.
ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಪ್ರಧಾನಿ ಮೋದಿ ಬಂದು ಏನು ಸಂದೇಶ ನೀಡಿದರು? ಯಾವ ಕೊಡುಗೆ ಕೊಟ್ಟು ಹೋದರು? ನಮ್ಮ ದೇಶದ ಪ್ರಧಾನಿಯವರು ಬೆಂಗಳೂರಿಗೆ ಬರುತ್ತಿದ್ದಾರೆ. ಏನೋ ಕೊಡುಗೆಯನ್ನು ಕೊಟ್ಟು ಹೋಗುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೆವು. ಆದರೆ ಎಲ್ಲಾ ಹುಸಿಯಾಗಿದೆ ಎಂದರು.
ಪ್ರಧಾನಿ ಮೋದಿ ಬಂದು ಹಾರಹಾಕಿ ಕೈ ಬೀಸಿದ್ದೇ ಕೊಡುಗೆ. ಇಲ್ಲಿ ಬಂದು ಬಾಯಿಯೋ, ಬೆಹನೋ, ಅಕ್ಕ, ತಂಗಿ, ಅಮ್ಮ ಅಂತ ಕೈ ಬೀಸಿ ಹೋಗಿದ್ದೇ ಅವರ ದೊಡ್ಡ ಕೊಡುಗೆ. ಕೆಂಪೇಗೌಡ ಏರ್ ಪೋರ್ಟ್ ಗೆ ಹೆಸರಿಟ್ಟಿದ್ದು ನಾವು. ಪ್ರಾಧಿಕಾರ ರಚನೆ ಮಾಡಿದ್ದು ಕಾಂಗ್ರೆಸ್ ಅವಧಿಯಲ್ಲಿ. ಭೂಮಿ ನೀಡಿದ್ದು ನಮ್ಮ ಸರ್ಕಾರದ ಅವಧಿಯಲ್ಲಿ. ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗಲೇ ವಿಮಾನ ನಿಲ್ದಾಣಕ್ಕೆ 2000 ಎಕರೆ ಸರ್ಕಾರಿ ಜಮೀನು ಮಂಜೂರು ಮಾಡಿದ್ದು. ಕೆಂಪೇಗೌಡರ ಪ್ರತಿಮೆ ನಿರ್ಮಾಣಕ್ಕೂ ಯೋಜನೆ ರೂಪಿಸಲು ತೀರ್ಮಾನಿಸಿದ್ದೆವು. ಈಗ ಕಾರ್ಯಕ್ರಮಕ್ಕಾಗಿ ಸರ್ಕಾರದ ವತಿಯಿಂದ ಹಣ ಖರ್ಚು ಮಾಡುವ ಅಗತ್ಯವಿರಲಿಲ್ಲ. ಸೂಚಿಸಿದರೆ ಕೆಐಎದವರೇ ಅದನ್ನೂ ಮಾಡುತ್ತಿದ್ದರು. ಅನಗತ್ಯವಾಗಿ ಪಕ್ಷದ ಕಾರ್ಯಕ್ರಮದ ರೀತಿಯಲ್ಲಿ ಬಿಬಿಂಬಿಸಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.