
ಏರೋ ಇಂಡಿಯಾ ವೈಮಾನಿಕ ಶೋ ಉದ್ಘಾಟನೆ ನೆರವೇರಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಭೇಟಿ ನೀಡಿದ್ದು, ಕಳೆದ ರಾತ್ರಿ ರಾಜ ಭವನದಲ್ಲಿ ತಂಗಿದ್ದರು.
ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಗಣ್ಯರೊಂದಿಗೆ ನರೇಂದ್ರ ಮೋದಿಯವರು ಔತಣಕೂಟದಲ್ಲಿ ಭಾಗಿಯಾಗಿದ್ದು, ಖ್ಯಾತ ನಟ ರಾಕಿಂಗ್ ಸ್ಟಾರ್ ಯಶ್, ನಿರ್ದೇಶಕ ಹಾಗೂ ನಟ ರಿಶಬ್ ಶೆಟ್ಟಿ, ನಿರ್ಮಾಪಕರಾದ ಅಶ್ವಿನಿ ಪುನೀತ್ ರಾಜಕುಮಾರ್, ವಿಜಯ್ ಕಿರಂಗದೂರು ಹಾಗೂ ಶ್ರದ್ಧಾ ಜೈನ್ ಭಾಗವಹಿಸಿದ್ದರು ಎಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ಮಾತನಾಡಿದ ನರೇಂದ್ರ ಮೋದಿಯವರು, ಕನ್ನಡ ಚಿತ್ರರಂಗ ಇಂದು ವಿಶ್ವವೇ ಬೆರಗಾಗುವಂತೆ ಮಾಡಿದೆ ಎಂದು ಕೊಂಡಾಡಿದ್ದಾರೆ. ಜೊತೆಗೆ ಅಶ್ವಿನಿ ಪುನೀತ್ ರಾಜಕುಮಾರ್ ಅವರೊಂದಿಗೆ ಮಾತನಾಡಿದ ಅವರು, ಚಿತ್ರರಂಗದಲ್ಲಿ ಪುನೀತ್ ರಾಜಕುಮಾರ್ ಅವರು ಸಲ್ಲಿಸಿದ ಸೇವೆ ಹಾಗೂ ಅವರ ಸಾಮಾಜಿಕ ಸೇವಾ ಕಾರ್ಯಗಳನ್ನು ಸ್ಮರಿಸಿಕೊಂಡಿದ್ದಾರೆ.