ಬಾಗಲಕೋಟೆ: ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ದತೆ ನಡೆಸಿರುವ ರಾಜ್ಯ ಕಾಂಗ್ರೆಸ್ ನಾಯಕರು ಜಿಲ್ಲಾ ಪ್ರವಾಸ, ಬಸ್ ಯಾತ್ರೆಗಳನ್ನು ಕೈಗೊಂಡಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತ್ಯೇಕ ಬಸ್ ಯಾತ್ರೆ ಕೈಗೊಳ್ಳುತ್ತಿರುವುದು ಇಬ್ಬರ ನಡುವಿನ ರಾಜಕೀಯ ಪೈಪೋಟಿಗೆ ಸಾಕ್ಷಿ ಎಂದು ಹೇಳಲಾಗುತ್ತಿದೆ. ಆದರೆ ಪ್ರತ್ಯೇಕ ಬಸ್ ಯಾತ್ರೆ ಬಗ್ಗೆ ಇದೀಗ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಜನವರಿ 9ರಿಂದ ಜಂಟಿಯಾಗಿ ಜಿಲ್ಲಾ ಪ್ರವಾಸ ಆರಂಭಿಸುತ್ತೇವೆ. ಸರ್ಕಾರದ ದುರಾಡಳಿತದ ಬಗ್ಗೆ ಜನರಿಗೆ ಮನವರಿಕೆ ಮಾಡುತ್ತೇವೆ. ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಒಟ್ಟಾಗಿ ಪ್ರವಾಸ ಮಾಡುತ್ತೇವೆ ಎಂದರು.
ಜಂಟಿ ಪ್ರವಾಸದ ಬಳಿಕ ಪ್ರತ್ಯೇಕವಾಗಿ ಬಸ್ ಯಾತ್ರೆ ಮಾಡಲಾಗುತ್ತದೆ. ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕದಲ್ಲಿ ಪ್ರವಾಸ ಮಾಡಲಾಗುವುದು. ಹಳೇ ಮೈಸೂರು ಭಾಗದಲ್ಲಿ ಡಿ.ಕೆ.ಶಿವಕುಮಾರ್ ಪ್ರವಾಸ ಮಾಡುತ್ತಾರೆ. ಈ ಬಗ್ಗೆ ದೆಹಲಿಯಲ್ಲಿಯೇ ಮಾತುಕತೆಯಾಗಿದೆ. ಕ್ಷೇತ್ರವಾರು ಪ್ರತ್ಯೇಕವಾಗಿ ಪ್ರವಾಸ ಮಾಡುತ್ತೇವೆ. ಒಟ್ಟಿಗೆ ಯಾತ್ರೆ ಮಾಡಿದರೆ ಎಲ್ಲಾ ಕ್ಷೇತ್ರಗಳನ್ನೂ ತಲುಪಲು ಸಾಧ್ಯವಿಲ್ಲ. ಬಳಿಕ ಹಳೇ ಮೈಸೂರು ಭಾಗದಲ್ಲಿಯೂ ನಾನು ಪ್ರವಾಸ ಮಾಡುತ್ತೇನೆ ಎಂದು ವಿವರಿಸಿದರು.