ಹಾಸನ: ಆರೋಪಿಗಳ ರಕ್ಷಣೆಗಾಗಿ ಸಂಸದ ಪ್ರಜ್ವಲ್ ರೇವಣ್ಣ ಒತ್ತಡ ಹೇರುತ್ತಿದ್ದಾರೆ ಎಂದು ಸಂಸದೆ ಮೇನಕಾ ಗಾಂಧಿ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಆರೋಪಿಗಳು ಅಕ್ರಮವಾಗಿ ವಿದ್ಯುತ್ ಹರಿಸಿ ಸಲಗವೊಂದನ್ನು ಕೊಂದು ಹೂತಿದ್ದರು. ಬಳಿಕ ಸತ್ತ ಆನೆಯ ದಂತ ಕತ್ತರಿಸಿ ಮಾರಾಟ ಮಾಡುವ ವೇಳೆ ಬೆಂಗಳೂರಿನಲ್ಲಿ ಸಿಕ್ಕಿಬಿದ್ದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯ ಇಲಾಖೆ ತನಿಖೆ ನಡೆಸುತ್ತಿದೆ.
ಆದರೆ ಪ್ರಕರಣದ ಆರೋಪಿಗಳಾದ ಚಂದ್ರೇಗೌಡ ಎಂಬುವವರು ಆನೆ ಕೊಂದಿದ್ದು, ಇದೀಗ ಆರೋಪಿ ರಕ್ಷಣೆ ಮಾಡುವಂತೆ ಸಂಸದ ಪ್ರಜ್ವಲ್ ರೇವಣ್ಣ ಒತ್ತಾಯಿಸುತ್ತಿದ್ದಾರೆ. ಆರೋಪಿಗಳ ರಕ್ಷಣೆಗಾಗಿ ಸ್ಥಳೀಯ ಅರಣ್ಯಾಧಿಕಾರಿಗಳು ಭಾರಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಮೇನಕಾ ಗಾಂಧಿ ಆರೋಪಿಸಿದ್ದಾರೆ.
ಹಾಸನ ಅರಣ್ಯ ಇಲಾಖೆ ಆರ್ ಎಫ್ ಒ ಕೇಸ್ ಮುಚ್ಚಿ ಹಾಕಲು ಯತ್ನಿಸಿದ್ದಾರೆ. ಪೊಲೀಸರ ಮೇಲೂ ಒತ್ತಡ ಹೇರಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ತಕ್ಷಣ ಮಧ್ಯಪ್ರವೇಶ ಮಾಡಿ ನಿಸ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.