ಮಂಗಳೂರು: ಪೊಲೀಸ್ ಸಿಬ್ಬಂದಿಯ ಮೇಲೆಯೇ ನೈತಿಕ ಪೊಲೀಸ್ ಗಿರಿ ನಡೆದ ಪ್ರಕರಣ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಕುಟುಂಬದೊಂದಿಗೆ ಹೋಟೆಲ್ ಗೆ ಹೋಗಿ ವಾಪಸ್ ಆಗುತ್ತಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ನಲ್ಲಿ ನಡೆದಿದೆ.
ಪತ್ನಿ ಹಾಗೂ ಆಕೆಯ ಸಹೋದರಿ ಜೊತೆ ಹೋಟೆಲ್ ನಲ್ಲಿ ಊಟ ಮುಗಿಸಿ ವಾಪಸ್ ಆಗುತ್ತಿದ್ದ ಪೊಲೀಸ್ ಸಿಬ್ಬಂದಿ ಕುಮಾರ್ ಎಂಬುವವರಿಗೆ, ಯುವತಿಯರನ್ನು ಎಲ್ಲಿಗೆ ಕರೆದುಕೊಂಡು ಹೋಗಿದ್ದೀಯಾ ಎಂದು ಪ್ರಶ್ನಿ ಇಬ್ಬರು ಯುವಕರು ಹಲ್ಲೆಗೆ ಯತ್ನಿಸಿದ್ದಾರೆ. ಅಲ್ಲದೇ ಅವಾಚ್ಯವಾಗಿ ಬೈದಿದ್ದಾರೆ. ತಾನು ಪೊಲೀಸ್ ಸಿಬ್ಬಂದಿ ಎಂದರೂ ಕೇಳಿಲ್ಲ. ಇಲ್ಲಿನ ವಿಚಾರ ನಿನಗೆ ಗೊತ್ತಲ್ಲ ಎಂದು ಹೇಳಿ ಅವಾಜ್ ಹಾಕಿದ್ದಾರೆ.
ಈ ಬಗ್ಗೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಇದೀಗ ತುಂಬೆ ನಿವಾಸಿ ಮನೀಶ್ ಪೂಜಾರಿ, ಮಂಜುನಾಥ್ ಆಚಾರ್ಯ ಎಂಬುವವರನ್ನು ಬಂಧಿಸಲಾಗಿದೆ.
ಪೊಲೀಸ್ ಸಿಬ್ಬಂದಿ ಕುಮಾರ್, ಬಂಟ್ವಾಳ ಡಿವೈಎಸ್ ಪಿ ಕಚೇರಿಯ ಸಿಬ್ಬಂದಿ. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಎನ್ ಐ ಎ ತನಿಖೆ ನಡೆಸುತ್ತಿದ್ದು, ಈ ವಿಭಾಗದಲ್ಲಿ ಕುಮಾರ್ ಕರ್ತವ್ಯ ನಿರ್ವಹಿಸುತ್ತಿದ್ದು, ಬಿ.ಸಿ ರೋಡ್ ನ ಪೊಲೀಸ್ ವಸತಿಗೃಹದಲ್ಲಿ ತನ್ನ ಪತ್ನಿ ಹಾಗೂ ಆಕೆಯ ಅಕ್ಕನ ಜೊತೆ ವಾಸವಾಗಿದ್ದಾರೆ ಎಂದು ತಿಳಿದುಬಂದಿದೆ.