
ಬೆಂಗಳೂರು: ಪೊಲೀಸ್ ಇಲಾಖೆಯನ್ನು ಕೇಸರಿಕರಣ ಮಾಡಲು ಹೊರಟಿದ್ದೀರಾ ? ನಮ್ಮ ಸರ್ಕಾರದಲ್ಲಿ ಇದಕ್ಕೆಲ್ಲ ಅವಕಾಶವಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಬಿಜೆಪಿ ಸರ್ಕಾರದ ಅವಧಿಯಲ್ಲಿ ಪೊಲೀಸ್ ಅಧಿಕಾರಿಗಳು ಕೇಸರಿ ಶಾಲು ಹಾಕಿದ್ದ ವಿಚಾರವನ್ನು ಪ್ರಸ್ತಾಪಿಸಿ, ಮಂಗಳೂರಿನಲ್ಲಿ ಪೊಲೀಸರೇ ಕೇಸರಿ ಶಾಲು ಹಾಕ್ತೀರಾ ಅಂದ್ರೆ ಹೇಗೆ ? ಇವತ್ತಿನ ಸಭೆಗೂ ಕೇಸರಿ ಶಾಲನ್ನು ಹಾಕಿಕೊಂಡು ಬರಬೇಕಾಗಿತ್ತು ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.
ಕಾನೂನು ಎಲ್ಲರಿಗೂ ಒಂದೇ ಎಷ್ಟೇ ದೊಡ್ಡವರಾದರೂ ಕಾನೂನು ಪಾಲನೆ ಮಾಡಬೇಕು. ಕಾನೂನು ಉಲ್ಲಂಘನೆ ಆದರೆ ಡಿಸಿಪಿಗಳು, ಎಸ್ ಪಿಗಳೇ ಹೊಣೆ. ರೌಡಿಸಂ ಚಟುವಟಿಕೆ ಮೇಲೆ ಹೆಚ್ಚಿನ ನಿಗಾ ವಹಿಸಬೇಕು. ಡ್ರಗ್ಸ್,ಅಕ್ರಮ ಚಟುವಟಿಕೆಗಳ ಮೇಲೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು. ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸಬೇಕು ಎಂದು ಖಡಕ್ ಆಗಿ ಸೂಚಿಸಿದರು.