ಚಿಕ್ಕಮಗಳೂರು: ಮಡಿಕೇರಿಯಲ್ಲಿ ನಿನ್ನೆ ತಮ್ಮ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತಪಡಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಪೊಲೀಸರೇನು ತಮಾಷೆ ಮಾಡ್ತಿದ್ದಾರಾ? ಕಾರಿನ ಮೇಲೆ ಮೊಟ್ಟೆ ಎಸೆಯುವವರೆಗೂ ಸುಮ್ಮನಿದ್ದಿದ್ದು ಯಾಕೆ? ಎಂದು ಪ್ರಶ್ನಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ವಿಪಕ್ಷ ನಾಯಕ ಎಂದರೆ ಶ್ಯಾಡೋ ಸಿಎಂ ಎಂದರ್ಥ. ಬಿಜೆಪಿ ಕಾರ್ಯಕರ್ತರು ಎಂದು ಹೇಳಿಕೊಂಡು ಪ್ರತಿಭಟನೆ ನಡೆಸಿದ್ದಾರೆ. ವಿಪಕ್ಷ ನಾಯಕನ ಕಾರಿನ ಮೇಲೆ ಮೊಟ್ಟೆ ಎಸೆಯುತ್ತಾರೆ ಎಂದರೆ ಏನರ್ಥ? ಕೊಡಗು ಜಿಲ್ಲೆಯ ಎಸ್ ಪಿ ಏನು ಮಾಡುತ್ತಿದ್ದಾರೆ? ಆಗಸ್ಟ್ 26ಕ್ಕೆ ಮತ್ತೆ ಬರುತ್ತೇನೆ. ಎಸ್ ಪಿ ಕಚೇರಿಗೆ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸುತ್ತೇವೆ ಎಂದು ಹೇಳಿದರು.
ಪೊಲೀಸರು ಬಜರಂಗದಳದ ಜತೆ ಶಾಮೀಲಾಗಿದ್ದಾರೆ. ಹಾಗಾಗಿ ಪ್ರತಿಭಟನಾಕಾರರನ್ನು ತಡೆಯದೇ ತಮಾಷೆ ನೋಡುತ್ತಿದ್ದಾರೆ. ಪೊಲೀಸರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದೇವೆ ಎಂದು ವಾಗ್ದಾಳಿ ನಡೆಸಿದರು.