ನವದೆಹಲಿ: ಒಂದು ರಾಷ್ಟ್ರ ಒಂದು ಚುನಾವಣೆ ನೀತಿ ವಿಚಾರದ ಬೆನ್ನಲ್ಲೇ ಇದೀಗ ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ಹೊಸ ಪರಿಕಲ್ಪನೆ ಪ್ರಸ್ತಾಪಿಸಿದ್ದು, ಪೊಲೀಸರಿಗೆ ಒಂದು ರಾಷ್ಟ್ರ ಒಂದು ಸಮವಸ್ತ್ರ ನೀತಿ ಜಾರಿಗೆ ತಂದರೆ ಉತ್ತಮ ಎಂದು ಹೇಳಿದ್ದಾರೆ.
ಸೂರಜ್ ಕುಂಡ್ ನಲ್ಲಿ ನಡೆಯುತ್ತಿರುವ ರಾಜ್ಯ ಗೃಹ ಸಚಿವರ ಚಿಂತನ್ ಶಿಬಿರ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪೊಲೀಸರಿಗೆ ಒಂದು ದೇಶ, ಒಂದು ಸಮವಸ್ತ್ರ ನೀತಿ ಜಾರಿಗೆ ತರಬೇಕು ಎಂಬ ನಿಟ್ಟಿನಲ್ಲಿ ಸಲಹೆ ನೀಡಿದರು. ಇದು ನನ್ನ ಸಲಹೆಯಷ್ಟೆ. ಆದರೆ ಪೊಲೀಸ್ ಯುನಿಫಾರ್ಮ್ ವಿಚಾರ ಆಯಾ ರಾಜ್ಯಗಳಿಗೆ ಬಿಟ್ಟ ವಿಚಾರ ಎಂದರು.
ಇದೇ ವೇಳೆ ಅಪರಾಧಗಳು ಹಾಗೂ ಅಪರಾಧಿಗಳನ್ನು ಹಿಡಿಯಲು ರಾಜ್ಯಗಳ ನಡುವೆ ಪರಸ್ಪರ ನಿಕಟ ಸಹಕಾರ ಅಗತ್ಯ. ಕಾನೂನು ಹಾಗೂ ಭದ್ರತೆಯ ಸವಾಲುಗಳನ್ನು ಎದುರಿಸಲು ಇಲಾಖೆಗೆ ಸಂಬಂಧಿಸಿದ ಎಲ್ಲಾ ಏಜೆನ್ಸಿಗಳು ಸಂಘಟಿತವಾಗಿರಬೇಕು. ಕಾಲಕ್ಕೆ ತಕ್ಕಂತೆ ಕಾನೂನು ಪರಿಶೀಲಿಸಿ ತಿದ್ದುಪಡಿ ಮಾಡಬೇಕು ಎಂದು ಹೇಳಿದರು.
ಪೊಲೀಸರಿಗೆ ಒಂದು ರಾಷ್ಟ್ರ ಒಂದು ಸಮವಸ್ತ್ರ ಇದೊಂದು ಆಲೋಚನೆ. ಅದನ್ನು ನಾನು ರಾಜ್ಯಗಳ ಮೇಲೆ ಹೇರುವುದಿಲ್ಲ. ಆದರೆ ಯೋಚಿಸಿ ಜಾರಿಗೆ ತಂದರೆ ಅಸಾಧ್ಯವೇನೂ ಅಲ್ಲ. ದೇಶಾದ್ಯಂತ ಪೊಲೀಸರ ಸಮವಸ್ತ್ರ ಒಂದೇ ರೀತಿಯಲ್ಲಿದ್ದರೆ ಉತ್ತಮ ಎಂಬುದು ನನ್ನ ಆಲೋಚನೆ ಎಂದು ಹೇಳಿದರು.