ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ, ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ನಡೆಸಿದ್ದ ಪೇಸಿಎಂ ಪೋಸ್ಟರ್ ಅಭಿಯಾನ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಪೇಸಿಎಂ ಪೋಸ್ಟರ್ ಅಂಟಿಸುವವರೆಗೆ ರಾಜ್ಯ ಗೃಹ ಇಲಾಖೆ ಏನು ಮಾಡುತ್ತಿತ್ತು ? ಇಂತಹ ಘಟನೆಗಳಿಗೆ ಅವಕಾಶ ಮಾಡಿಕೊಡಬಾರದಾಗಿತ್ತು. ಸರ್ಕಾರಕ್ಕೆ ಇದರಿಂದ ಮುಜುಗರವಾಗಿದೆ. ಇದು ಗೃಹ ಇಲಾಖೆಯ ವೈಫಲ್ಯ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದ ವಿಪಕ್ಷ ಕಾಂಗ್ರೆಸ್ ಸಿಎಂ ಬೊಮ್ಮಾಯಿ ವಿರುದ್ಧ ಪೇಸಿಎಂ ಕ್ಯೂಆರ್ ಕೋಡ್ ಪೋಸ್ಟರ್ ಅಂಟಿಸಿ ಅಭಿಯಾನ ನಡೆಸಿತ್ತು. ಪೇಸಿಎಂ ಪೋಸ್ಟರ್ ಅಭಿಯಾನ ರಾಜ್ಯ ಮಾತ್ರವಲ್ಲ ರಾಷ್ಟ್ರ ಮಟ್ಟದಲ್ಲಿಯೂ ಸುದ್ದಿಯಾಗಿತ್ತು.
ಇದೀಗ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ಅರುಣ್ ಸಿಂಗ್, ಪೇಸಿಎಂ ಪೋಸ್ಟರ್ ಗಳನ್ನು ಬೆಂಗಳೂರಿನ ನಗರದ ಗೋಡೆಗಳಲ್ಲಿ ಅಂಟಿಸುವರೆಗೂ ಸರ್ಕಾರ ಸುಮ್ಮನಿದ್ದಿದ್ದೇಕೆ ? ಇದು ಗೃಹ ಇಲಾಖೆ ವೈಫಲ್ಯ ಎಂದು ಕಿಡಿಕಾರಿದ್ದಾರೆ ಎನ್ನಲಾಗಿದೆ.