ಮೈಸೂರು: ಭಾರತ್ ಜೋಡೋ ಯಾತ್ರೆಯಲ್ಲಿ ಪೇಸಿಎಂ ಟಿ ಶರ್ಟ್ ಧರಿಸಿ ಪಾದಯಾತ್ರೆಯಲ್ಲಿ ಪಾಲ್ಗೊಗೊಂಡಿದ್ದ ಯುವಕನ ವಿರುದ್ಧ ಎಫ್ ಐ ಆರ್ ದಾಖಲಿಸಿರುವ ಘಟನೆ ನಡೆದಿದೆ.
ಭಾರತ್ ಜೋಡೋ ಯಾತ್ರೆಯಲ್ಲಿ ಸಿಂಧಗಿಯ ಅಕ್ಷಯ್ ಎಂಬ ಯುವಕ ಪೇಸಿಎಂ ಬಾವುಟ ಹಾಗೂ ಟಿ ಶರ್ಟ್ ಧರಿಸಿ ಹೆಜ್ಜೆ ಹಾಕುತ್ತಿದ್ದ. ಇದನ್ನು ಗಮನಿಸಿದ ಪೊಲೀಸರು ಯುವಕನನ್ನು ಹಿಡಿದು ಥಳಿಸಿದ್ದಲ್ಲದೇ ಆತನ ಕೈಲಿದ್ದ ಬಾವುಟ ಕಿತ್ತುಕೊಂಡು ಧರಿಸಿದ್ದ ಟಿ ಶರ್ಟ್ ಬಿಚ್ಚಿಸಿದ್ದಾರೆ. ಈ ನಡುವೆ ಪೇಸಿಎಂ ಟಿ ಶರ್ಟ್ ಧರಿಸಿದ್ದ ಯುವಕನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.
ಈ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಬಿಜೆಪಿಯವರಿಗೆ ನಾವು ಮಾಡುವ ಕೆಲಸವನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಹಾಗಾಗಿ ನಮ್ಮ ಕಾರ್ಯಕರ್ತರ ಮೇಲೆ ಪೊಲೀಸರಿಂದ ದಬ್ಬಾಳಿಕೆ ನಡೆಸಿದ್ದಾರೆ. ಬಿಜೆಪಿಯವರು ನನ್ನನ್ನೇ ಬಿಡುತ್ತಿಲ್ಲ, ಇನ್ನು ನಮ್ಮ ಕಾರ್ಯಕರ್ತರನ್ನು ಬಿಡುತ್ತಾರಾ? ರಸ್ತೆ ಮೇಲೆ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಲು ಪೊಲೀಸರಿಗೆ ಅಧಿಕಾರ ಕೊಟ್ಟವರು ಯಾರು ತಕ್ಷಣ ಹಲ್ಲೆ ನಡೆಸಿದ ಅಧಿಕಾರಿಯನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು ಇಂದು ಪಾಂಡವಪುರದಿಂದ ಆರಂಭವಾಗಿ ಮೈಸೂರಿಗೆ ಎಂಟ್ರಿ ಕೊಟ್ಟಿದೆ.