ಬೆಂಗಳೂರು: ಮನೆಗೆ ಪೆಟ್ರೋಲ್ ಸುರಿದು ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ಬೆಂಗಳೂರಿನ ದಾಬಸ್ ಪೇಟೆ ಬಳಿಯ ಹೊನ್ನೇನಹಳ್ಳಿಯಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಹೊನ್ನೇನಹಳ್ಳಿಯಲ್ಲಿ ತಡ ರಾತ್ರಿ ದುಷ್ಕರ್ಮಿಗಳು ಮನೆಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಕ್ಷಣಾರ್ಧದಲ್ಲಿ ಮನೆ ಧಗಧಗನೆ ಹೊತ್ತಿ ಉರಿದಿದೆ. ಸ್ಥಳೀಯರ ಸಹಾಯದಿಂದಾಗಿ ಮನೆಯಲ್ಲಿದ್ದ ಪುರುಷೋತ್ತಮ್ ದಂಪತಿ ಮಗುವಿನೊಂದಿಗೆ ಮನೆಯಿಂದ ಹೊರಬಂದು ಬಚಾವಾಗಿದ್ದಾರೆ.
ಪುರುಷೋತ್ತಮ್ ದಂಪತಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಮೂರು ತಿಂಗಳ ಮಗು ಅಪಾಯದಿಂದ ಪಾರಾಗಿದೆ. ಮನೆಗೆ ಹೊರಗಿನಿಂದ ಚಿಲಕಹಾಕಿದ ದುಷ್ಕರ್ಮಿಗಳು ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದೆ. ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.