ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆ ಆಗಿರೋದ್ರಿಂದ ಸ್ವಂತ ವಾಹನದಲ್ಲಿ ಪ್ರಯಾಣ ಮಾಡೋದು ಜನಸಾಮಾನ್ಯರಿಗೆ ಕಷ್ಟವಾಗಿದೆ. ಟ್ಯಾಕ್ಸಿಯಂತೂ ಮತ್ತಷ್ಟು ದುಬಾರಿಯಾಗಿದೆ. ಇದೀಗ ಊಬರ್ ಕೂಡ ತನ್ನ ಪ್ರಯಾಣ ದರವನ್ನು ಹೆಚ್ಚಿಸಲು ನಿರ್ಧರಿಸಿದೆ. ತೈಲ ಬೆಲೆಗಳಲ್ಲಿನ ಏರಿಳಿತಗಳನ್ನು ಗಮನದಲ್ಲಿರಿಸಿಕೊಂಡು ನಿರ್ಧಾರ ತೆಗೆದುಕೊಳ್ಳುವುದಾಗಿ ಊಬರ್ ಹೇಳಿದೆ.
ಸದ್ಯ ಮುಂಬೈ ಹಾಗೂ ದೆಹಲಿಯಲ್ಲಿ ಊಬರ್ ಟ್ಯಾಕ್ಸಿ ಸೇವೆಗಳ ದರ ಏರಿಕೆಯಾಗ್ತಿದೆ. ದೆಹಲಿಯಲ್ಲಿ ಊಬರ್ ಪ್ರಯಾಣ ವೆಚ್ಚ ಶೇ.12ರಷ್ಟು ಏರಿಕೆಯಾಗಲಿದೆ. ತೈಲ ಬೆಲೆ ಏರಿಕೆಯಿಂದ ಸಾಕಷ್ಟು ತೊಂದರೆಯಾಗ್ತಿರೋದಾಗಿ ಊಬರ್ ಹೇಳಿಕೊಂಡಿದೆ. ಈ ಬಗ್ಗೆ ಚಾಲಕರಿಂದ್ಲೂ ಅಭಿಪ್ರಾಯ ಸಂಗ್ರಹಿಸಿದ ಬಳಿಕ ದರ ಹೆಚ್ಚಳದ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದೆ.
ಕೆಲ ದಿನಗಳ ಹಿಂದಷ್ಟೆ ಊಬರ್, ಮುಂಬೈನಲ್ಲಿ ತನ್ನ ಟ್ಯಾಕ್ಸಿ ಸೇವಾ ವೆಚ್ಚವನ್ನು ಶೇ.15ರಷ್ಟು ಏರಿಕೆ ಮಾಡಿತ್ತು. ಸದ್ಯ ಮುಂಬೈನಲ್ಲಿ ಪೆಟ್ರೋಲ್ ಬೆಲೆ 120 ರೂಪಾಯಿ 51 ಪೈಸೆ ಇದೆ. ಡೀಸೆಲ್ 104 ರೂಪಾಯಿ 77 ಪೈಸೆಗೆ ಬಂದು ತಲುಪಿದೆ. ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 105 ರೂಪಾಯಿ 41 ಪೈಸೆ ಇದ್ದು, ಡೀಸೆಲ್ 96 ರೂಪಾಯಿ 67 ಪೈಸೆ ಆಗಿದೆ.