ತುಮಕೂರು: ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಕಾಂಗ್ರೆಸ್ ನಾಯಕರು ನಡೆಸಿದ ಪ್ರತಿಭಟನೆ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪುಸ್ತಕ ಹರಿದು ಆಕ್ರೋಶ ವ್ಯಕ್ತಪಡಿಸಿದ್ದಕ್ಕೆ ತಿರುಗೇಟು ನೀಡಿರುವ ಸಚಿವ ಆರ್.ಅಶೋಕ್, ಪುಸ್ತಕ ಹರಿದರೆ ನ್ಯೂಸ್ ಆಗ್ತಿನಿ ಅಂತ ಹಾಗೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ತುಮಕೂರಿನ ಮಾಯಸಂದ್ರದಲ್ಲಿ ಮಾತನಾಡಿದ ಸಚಿವ ಆರ್.ಅಶೋಕ್, ಡಿಕೆಶಿ ಹಿಂದೆ ಸರ್ಕಾರದಲ್ಲಿ ಮಂತ್ರಿಯಾಗಿ ಕೆಲಸ ಮಾಡಿದವರು. ಯಾರೋ ಕೊಟ್ಟ ಪುಸ್ತಕ ಓದಿ ಮಾತನಾಡುತ್ತಿದ್ದಾರೆ. ಮೊದಲು ಪುಸ್ತಕವನ್ನು ಸರಿಯಾಗಿ ಓದಲಿ. ಎರಡು ಸರ್ಕಾರದ ಅವಧಿಯ ಪುಸ್ತಕ ಓದಿ ಮಾತನಾಡಲಿ ಎಂದರು.
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಕೆಂಪೇಗೌಡರ ಬಗ್ಗೆ ಪಾಠವೇ ಇರಲಿಲ್ಲ. ಬೆಂಗಳೂರು ಎಂದರೆ ಟಿಪ್ಪು ಸುಲ್ತಾನ್ ತೋರಿಸುತ್ತಿದ್ದರು. ಟಿಪ್ಪು ಪರ್ಷಿಯನ್, ಉರ್ದು ಭಾಷೆ ಪ್ರಚಾರ ಮಾಡಿದರು. ಇದೆಲ್ಲ ಅವರ ಕಾಮಾಲೆ ಕಣ್ಣಿಗೆ ಕಾಣಲಿಲ್ಲ. ಆಗ ಯಾರೂ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ಮಾಡಲಿಲ್ಲ. ನಾವು ಆ ತಪ್ಪುಗಳನ್ನು ಸರಿ ಪಡಿಸಿದ್ದಕ್ಕೆ ನಮ್ಮ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ನಮ್ಮ ಸರ್ಕಾರದಲ್ಲಿ ಕೆಂಪೇಗೌಡರ ಬಗ್ಗೆ ಪಾಠ ಸೇರಿಸಿದ್ದೇವೆ. ಕುವೆಂಪು ಬಗ್ಗೆ 10 ಪ್ಯಾರಾ ಪಠ್ಯವಿದೆ. ಆದರೂ ಈಗ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.