ಮೈಸೂರು: ವಿಧಾನಸಭಾ ಚುನಾವಣಾ ಅಖಾಡ ರಂಗೇರಿದ್ದು, ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪರ ನಟ ಶಿವರಾಜ್ ಕುಮಾರ್, ಪತ್ನಿ ಗೀತಾ ಶಿವರಾಜ್ ಕುಮಾರ್ ಅಬ್ಬರದ ಪ್ರಚಾರ ನಡೆಸಿದ್ದಾರೆ. ಸಿದ್ದರಾಮಯ್ಯ ಪರ ಶಿವರಾಜ್ ಕುಮಾರ್ ಪ್ರಚಾರ ನಡೆಸಿದ್ದಕ್ಕೆ ಬಿಜೆಪಿ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಿವಣ್ಣ ಒಬ್ಬ ವ್ಯಕ್ತಿ ಪರವಾಗಿ ಪ್ರಚಾರ ಮಾಡ್ತಿರುವುದು ಸರಿಯಲ್ಲ ಎಂದು ಸಂಸದ ಪ್ರತಾಪ್ ಸಿಂಹ ಗರಂ ಆಗಿ ಮಾತನಾಡಿದ್ದಾರೆ. ನನಗೆ ಶಿವಣ್ಣನ ಬಗ್ಗೆ ಅಭಿಮಾನವಿದೆ. ಆದರೆ ಅವರು ಸಿದ್ದರಾಮಯ್ಯ ಪರ ಒಬ್ಬ ವ್ಯಕ್ತಿ ಪರ ಪ್ರಚಾರ ನಡೆಸುತ್ತಿರುವುದು ಸರಿಯಲ್ಲ ಎಂದಿದ್ದಾರೆ.
ಡಾ.ರಾಜ್ ಕುಮಾರ್ ಕುಟುಂಬವನ್ನು ರಾಜಕೀಯದ ಹೊರತಾಗಿ ನೋಡ್ತೀವಿ. ಡಾ.ರಾಜ್ ಅವರು ರಾಜಕೀಯ ಸೋಂಕು ಅಂಟಿಸಿಕೊಂಡಿರಲಿಲ್ಲ. ಶಿವಣ್ಣ ಓರ್ವ ವ್ಯಕ್ತಿ ಪರವಾಗಿ ಚುನಾವಣಾ ಪ್ರಚಾರ ಮಾಡುತ್ತಿರುವುದು ಸೂಕ್ತವಲ್ಲ, ಸಚಿವ ವಿ. ಸೋಮಣ್ಣ ಅವರು, ಪುನೀತ್ ರಾಜಕುಮಾರ್ ಸರ್ ಹೆಸರಿನಲ್ಲಿ ಬಡವರಿಗಾಗಿ ಆಸ್ಪತ್ರೆ ಕಟ್ಟಿದರು. ಸೋಮಣ್ಣ ಅವರ ಕಾರ್ಯವನ್ನು ರಾಘವೇಂದ್ರ ರಾಜಕುಮಾರ್ ಶ್ಲಾಘಿಸಿದ್ದರು. ಹೀಗಿರುವಾಗ ಸಿದ್ದರಾಮಯ್ಯ ಪರವಾಗಿ ಶಿವಣ್ಣ ಪ್ರಚಾರಕ್ಕಿಳಿದಿದ್ದು ಸರಿಯಲ್ಲ ಎಂದಿದ್ದಾರೆ.
ಇನ್ನು ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಪ್ರತಾಪ್ ಸಿಂಹ, ಪುನೀತ್ ರಾಜಕುಮಾರ್ ಸರ್ ಹೆಸರಿನಲ್ಲಿ ಬಡವರಿಗಾಗಿ ಆಸ್ಪತ್ರೆ ಕಟ್ಟಿದ ಸೋಮಣ್ಣ, ಮನಮೆಚ್ಚಿ ಶ್ಲಾಘಿಸಿದ ರಾಘಣ್ಣ, ಸಿದ್ರಾಮಣ್ಣ ಪರವಾಗಿ ಪ್ರಚಾರಕ್ಕಿಳಿದ ಶಿವಣ್ಣ! ಅವರವ ಭಾವ ಭಕುತಿಗೆ…ಎಂದು ಟಾಂಗ್ ನೀಡಿದ್ದಾರೆ.