ಹುಬ್ಬಳ್ಳಿ: ಆರ್.ಎಸ್.ಎಸ್ ಚಡ್ಡಿ ಸುಡುವ ಅಭಿಯಾನ ಆರಂಭಿಸುವುದಾಗಿ ಹೇಳಿಕೆ ನೀಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಜವಾಬ್ದಾರಿಯುತ ಸ್ಥಾನದಲ್ಲಿದ್ದು ಇಂತಹ ಮಾತುಗಳನ್ನಾಡುವುದು ಶೋಭೆಯಲ್ಲ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್, ರಾಷ್ಟ್ರಭಕ್ತಿಗೆ ಹೆಸರಾದ, ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಆರ್.ಎಸ್.ಎಸ್. ಬಗ್ಗೆ ಕೆಟ್ಟದಾಗಿ ಮಾತನಾಡಿರುವುದು ಖಂಡನೀಯ. ಓರ್ವ ಮಾಜಿ ಸಿಎಂ ಆಗಿ, ಐದು ವರ್ಷ ಆಡಳಿತ ನಡೆಸಿದವರು, ಈಗ ವಿಪಕ್ಷ ನಾಯಕನಂತ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಿದ್ದರಾಮಯ್ಯ ಪುಂಡ, ಪೋಕರಿಯಂತೆ ಮಾತನಾಡುತ್ತಿದ್ದಾರೆ. ಇಂತಹ ಕೀಳುಮಟ್ಟದ ಹೇಳಿಕೆ ನೀಡುವುದು ಅವರಿಗೆ ಗೌರವ ತರಲ್ಲ ಎಂದರು.
ಆರ್ ಎಸ್ ಎಸ್ ಚಡ್ಡಿ ಇದ್ದಿದ್ದರಿಂದಲೇ ಇಂದು ದೇಶದಲ್ಲಿ ಸಂಸ್ಕೃತಿ, ರಾಷ್ಟ್ರಭಕ್ತಿ, ಒಗ್ಗಟ್ಟು ಎನ್ನುವುದು ಇದೆ. ಕಾಂಗ್ರೆಸ್ ನಾಯಕರ ಕೆಟ್ಟ ಹೇಳಿಕೆಗಳೇ ಅವರಿಗೆ ತಿರುಗುಬಾಣವಾಗಲಿದೆ ಎಂದು ವಾಗ್ದಾಳಿ ನಡೆಸಿದರು.