ಬೆಂಗಳೂರು: 545 ಪಿಎಸ್ಐ ಹುದ್ದೆ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಪಿಎಸ್ ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ಎಡಿಜಿಪಿ ಅಮೃತ್ ಪೌಲ್, ಶಾಂತಕುಮಾರ್ ಸೇರಿದಂತೆ ಹಲವರ ಮನೆ ಮೇಲೆ ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಅಮೃತ್ ಪೌಲ್ ಅವರ ಸಹಕಾರ ನಗರದಲ್ಲಿರುವ ನಿವಾಸದ ಮೇಲೂ ದಾಳಿ ನಡೆದಿದೆ.
ಪಿಎಸ್ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ 11 ಕಡೆಗಳಲ್ಲಿ ಆರೋಪಿಗಳ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.