ಹಾಸನ: ಪಿಎಸ್ಐ ಅಕ್ರಮ ಹಗರಣಕ್ಕಿಂತಲು ದೊಡ್ಡ ಹಗರಣ ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಾತಿ ಅಕ್ರಮ. ಬರೋಬ್ಬರಿ 80 ಲಕ್ಷ ರೂಪಾಯಿಯನ್ನು ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಫಿಕ್ಸ್ ಮಾಡಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಶಿಕ್ಷಣ ಇಲಾಖೆಯಲ್ಲಿ ಹೆಬ್ಬೆಟ್ಟು ಒತ್ತುವವರನ್ನು ನೇಮಕ ಮಾಡಿದ್ದಾರೆ. ಸಹಾಯಕ ಪ್ರಾಧ್ಯಾಪಕ ಹುದ್ದೆ ಅಕ್ರಮ ಪಿಎಸ್ಐ ಹುದ್ದೆ ನೇಮಕಾತಿ ಹಗರಣಕ್ಕಿಂತ ದೊಡ್ಡದಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಹಿಂದೆ ಯಾರ ಕೈವಾಡವಿದೆ ? 500ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಸಿಕ್ಕಿದೆ. ದುಡ್ಡುಕೊಟ್ಟು ಬಂದವರು ಎಷ್ಟರ ಮಟ್ಟಿಗೆ ಪ್ರಾಮಾಣಿಕವಾಗಿರುತ್ತಾರೆ ಎಂದು ಪ್ರಶ್ನಿಸಿದರು.
ಇನ್ನು ಪಿಎಸ್ಐ ಹುದ್ದೆ ಅಕ್ರಮಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸ್ ಅಧಿಕಾರಿಗಳು ಸೇರಿದಂತೆ ಹಲವರನ್ನು ಬಂಧಿಸಿದ್ದಾರೆ. ಆದರೆ ಕಿಂಗ್ ಪಿನ್ ಹೆಸರನ್ನು ಹೊರಗೆ ತರುವ ತಾಕತ್ತು ಸರ್ಕಾರಕ್ಕೆ ಇದೆಯಾ ? ಕಿಂಗ್ ಪಿನ್ ಟಚ್ ಮಾಡಿದ್ರೆ ರಾಜ್ಯ ಸರ್ಕಾರ ಉಳಿಯುತ್ತಾ ? ಆರ್ ಎಸ್ ಎಸ್ ಕಪಿಮುಷ್ಠಿಯಲ್ಲಿ ಸಿಲುಕಿದ್ದಾರೆ ಸಿಎಂ ಬೊಮ್ಮಾಯಿಯವರು ಎಂದು ಹೇಳಿದರು.
ಶಿಕ್ಷಣ ಇಲಾಖೆಯಲ್ಲಿ ಕೋಟ್ಯಂತರ ರೂಪಾಯಿ ವಸೂಲಿಯಾಗಿದೆ. ಯಾವ ಇಲಾಖೆಯಾದರೂ ಸರಿಯಾಗಿ ಇದೆಯಾ ? ಕಾಟ ತಡೆಯಲಾಗದೇ ಅಧಿಕರಿಗಳು ರಜೆ ಹಾಕಿ ಹೋಗಿದ್ದಾರೆ. ಮಹಾರಾಷ್ಟ್ರ ಕೇಡರ್ ಕಮಿಷನರ್ ಆಗಿ ಮಾಡಿದ್ದಾರೆ. ಯಾವ ಯಾವ ಗೆಸ್ಟ್ ಹೌಸ್ ನಲ್ಲಿ ವ್ಯವಹಾರ ಮಾಡಿದ್ರು ಗೊತ್ತು. ಅಕ್ಕಪಕ್ಕ ಇಟ್ಟುಕೊಂಡವರನ್ನು ಮೊದಲು ಬಲಿ ಹಾಕಿ ಎಂದು ಸರ್ಕಾರಕ್ಕೆ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.