ಕೋಮು ಗಲಭೆ ಪ್ರಕರಣಗಳಲ್ಲಿ ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಕೈವಾಡವಿದೆ ಎಂಬ ಆರೋಪಗಳು ಪದೇ ಪದೇ ಕೇಳಿಬರುತ್ತಿದ್ದು, ಈ ಹಿನ್ನಲೆಯಲ್ಲಿ ಪಿಎಫ್ಐ ಸಂಘಟನೆಯನ್ನು ದೇಶದಾದ್ಯಂತ ನಿಷೇಧಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ ಎಂದು ಹೇಳಲಾಗಿದೆ.
ಇತ್ತೀಚೆಗೆ ನಡೆದ ರಾಮನವಮಿ ಮೆರವಣಿಗೆ ಸಂದರ್ಭದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಹಿಂಸಾಚಾರ ನಡೆದಿದ್ದು, ಇದರ ಹಿಂದೆ ಪಿಎಫ್ಐ ಸಂಘಟನೆಯ ಕೈವಾಡವಿದೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಇದನ್ನು ನಿಷೇಧಿಸುವಂತೆ ಆಗ್ರಹ ಕೇಳಿಬಂದಿತ್ತು.
ಈಗಾಗಲೇ ಕೆಲವು ರಾಜ್ಯಗಳಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ನಿಷೇಧಿಸಲಾಗಿದ್ದು, ಒಂದು ವೇಳೆ ಕೇಂದ್ರ ಸರ್ಕಾರವೂ ಸಹ ಈ ತೀರ್ಮಾನ ಕೈಗೊಂಡರೆ ಇದು ದೇಶದಾದ್ಯಂತ ಅನ್ವಯವಾಗಲಿದೆ. ನಿಷೇಧ ಸುದ್ದಿ ಕುರಿತಂತೆ ಪ್ರತಿಕ್ರಿಯಿಸಿರುವ ಪಿಎಫ್ಐ ಪ್ರಧಾನ ಕಾರ್ಯದರ್ಶಿ ಅನೀಸ್ ಅಹಮದ್, ನಮ್ಮ ಸಂಘಟನೆ ಯಾವುದೇ ದೇಶ ವಿರೋಧಿ ಕೃತ್ಯದಲ್ಲಿ ತೊಡಗಿಲ್ಲ. ಒಂದು ವೇಳೆ ನಿಷೇಧಿಸಿದರೆ ಅದನ್ನು ಪ್ರಜಾಸತ್ತಾತ್ಮಕ ಮತ್ತು ಕಾನೂನು ಮಾರ್ಗದ ಮೂಲಕ ಎದುರಿಸಲಿದ್ದೇವೆ ಎಂದಿದ್ದಾರೆ.