ಸಣ್ಣ ಮತ್ತು ಅತಿ ಸಣ್ಣ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಸಲುವಾಗಿ ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಜಾರಿಗೊಳಿಸಿದ್ದು, ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಹಣ ಪಾವತಿ ಮಾಡಲಾಗುತ್ತಿದೆ.
ಈ ಯೋಜನೆಯಡಿ ಕೇಂದ್ರ ಸರ್ಕಾರ, ಒಬ್ಬ ರೈತರಿಗೆ ವರ್ಷಕ್ಕೆ ಆರು ಸಾವಿರ ರೂಪಾಯಿಗಳನ್ನು ನೀಡಿದರೆ, ರಾಜ್ಯ ಸರ್ಕಾರ ಇದಕ್ಕೆ ಇನ್ನೂ ನಾಲ್ಕು ಸಾವಿರ ರೂಪಾಯಿ ಸೇರಿಸಿ ಒಟ್ಟು 10 ಸಾವಿರ ರೂಪಾಯಿಗಳನ್ನು ಪಾವತಿ ಮಾಡಲಾಗುತ್ತಿದೆ. ಆದರೆ ಈ ಯೋಜನೆಯನ್ನು ಕೆಲವರು ದುರುಪಯೋಗಪಡಿಸಿಕೊಂಡಿರುವುದು ಕಂಡುಬಂದಿದೆ.
ತೆರಿಗೆ ಪಾವತಿಸುವ ಹಿಡುವಳಿದಾರರು ಮತ್ತು ಸಾಂಸ್ಥಿಕ ಭೂ ಹಿಡುವಳಿದಾರರು ಈ ಯೋಜನೆ ಅಡಿ ಹಣ ಪಡೆಯಲು ಅರ್ಹರಲ್ಲ. ಆದರೆ ಸ್ವಯಂ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದ್ದ ಕಾರಣ ಇದನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ.
ರಾಜ್ಯದಲ್ಲಿ 3.97 ಲಕ್ಷ ಅನರ್ಹರು ಈ ಯೋಜನೆ ಅಡಿ ಒಟ್ಟು 442 ಕೋಟಿ ರೂಪಾಯಿಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಹೇಳಲಾಗಿದ್ದು, ಇದೀಗ ಹಣವನ್ನು ಮರಳಿ ಪಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಅನರ್ಹರ ಪಟ್ಟಿಯನ್ನು ಬ್ಯಾಂಕುಗಳಿಗೆ ಕಳಿಸಿಕೊಡಲಾಗಿದ್ದು, ಹಣ ವಸೂಲಿ ಕಾರ್ಯ ನಡೆಯುತ್ತಿದೆ.